2016-17 ಸಾಲಿನಲ್ಲಿ ತಿರುಪತಿ ದೇವಸ್ಥಾನಕ್ಕೆ ಬಂದ ನಗದು ದೇಣಿಗೆ ಎಷ್ಟು ಕೋಟಿ ಗೊತ್ತೇ ?

ತಿರುಪತಿ, ಎ.8: ಭಕ್ತರ ಪ್ರವಾಹವೇ ಹರಿದು ಬರುತ್ತಿರುವ ತಿರುಪತಿ ದೇವಸ್ಥಾನಕ್ಕೆ 2016-17ನೆ ಸಾಲಿನಲ್ಲಿ ರೂ.1,038 ಕೋಟಿ ನಗದು ದೇಣಿಗೆ ಬಂದಿದೆಯೆಂದು ದೇವಸ್ಥಾನದ ಆಡಳಿತ ನಡೆಸುವ ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ತಿಳಿಸಿದೆ.
ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಡಿ ಸಾಂಬಶಿವ ರಾವ್ ನೀಡಿದ ಮಾಹಿತಿಯಂತೆ 2.68 ಕೋಟಿ ಭಕ್ತರು ದೇವಳಕ್ಕೆ 2016-17 ಆರ್ಥಿಕ ವರ್ಷದಲ್ಲಿ ಭೇಟಿ ನೀಡಿದ್ದಾರೆ. ಈ ಅವಧಿಯಲ್ಲಿ ಒಟ್ಟು 10.46 ಕೋಟಿ ಲಡ್ಡುಗಳನ್ನು ಮಾರಾಟ ಮಾಡಲಾಗಿದೆಯೆಂದೂ ಅವರು ತಿಳಿಸಿದರು.
2017-18ನೆ ಆರ್ಥಿಕ ವರ್ಷಕ್ಕೆ ರೂ.2,858 ಕೋಟಿ ಬಜೆಟನ್ನು ದೇವಸ್ಥಾನ ಆಡಳಿತ ಮಂಡಳಿ ಫೆಬ್ರವರಿ ತಿಂಗಳಲ್ಲಿ ಅನುಮೋದಿಸಿದೆ.
ದೇವಸ್ಥಾನದ ಹುಂಡಿಗಳಲ್ಲಿ ಭಕ್ತರು ಹಾಕಿರುವ ಒಟ್ಟು ಹಣ ರೂ.1,100 ಆಗಿದ್ದರೆ, ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ಠೇವಣಿಯಿಂದ ರೂ.807.7 ಕೋಟಿ ಆದಾಯ ಬಂದಿದೆ.
ಭಕ್ತರು ನೀಡಿದ ಕೂದಲಿನಿಂದ ರೂ.100 ಕೋಟಿ ಆದಾಯ ಗಳಿಸುವ ನಿರೀಕ್ಷೆಯೂ ಇದೆ. ವಿಶೇಷ ಪ್ರವೇಶ ದರ್ಶನದ ರೂ.300 ಶುಲ್ಕ ಸಂಗ್ರದಿಂದ ಈ ವರ್ಷ ರೂ.256 ಕೋಟಿ ಗಳಿಸುವ ನಿರೀಕ್ಷೆಯಿದ್ದರೆ, ಲಡ್ಡು ಮಾರಾಟದಿಂದ ರೂ.165 ಕೋಟಿ ಗಳಿಸುವ ಅಂದಾಜಿದೆ.







