ಮೇ 14ರಂದು ಮೂಡುಬಿದಿರೆಯಲ್ಲಿ 'ಹಿಂದು ಯುವ ಸಮಾವೇಶ'

ಮೂಡುಬಿದಿರೆ, ಎ.8: ವಿಶ್ವ ಹಿಂದು ಪರಿಷತ್, ಬಜರಂಗದಳ ಮೂಡುಬಿದಿರೆ ಪ್ರಖಂಡದ ವತಿಯಿಂದ ಮೇ 14ರಂದು ಸಂಜೆ 4 ಗಂಟೆಗೆ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ಹಿಂದು ಯುವ ಸಮಾವೇಶ ನಡೆಯಲಿದೆ ಎಂದು ಯುವ ಸಮಾವೇಶದ ಸಂಚಾಲಕ ಚೇತನ್ ಕುಮಾರ್ ಶೆಟ್ಟಿ ಹೇಳಿದರು.
ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಮೂಡುಬಿದಿರೆ ಜೈನಮಠದ ಸ್ವಸ್ತಿ ಶ್ರೀ ಭಟ್ಟಾರಕ ಸ್ವಾಮೀಜಿ, ಗುರುಕೃಪಾ ಸೇವಾಶ್ರಮದ ಶ್ರೀ ವಿಖ್ಯಾತನಂದ ಸ್ವಾಮೀಜಿ, ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ, ಶ್ರೀ ಕ್ಷೇತ್ರ ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಲಿದ್ದಾರೆ. ವಿಹಿಂಪ ಕರ್ನಾಟಕ ಪ್ರಾಂತದ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಅಧ್ಯಕ್ಷತೆ ವಹಿಸಲಿದ್ದು, ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ ಎಂ. ಮುಖ್ಯ ಭಾಷಣ ಮಾಡಲಿದ್ದಾರೆ. ಬಜರಂಗದಳ ಪ್ರಾಂತ ಸಂಚಾಲಕ ಶರಣ್ ಪಂಪ್‌ವೆಲ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಸಮಾವೇಶಕ್ಕೆ ಮುನ್ನ ಅಪರಾಹ್ನ 3 ಗಂಟೆಗೆ ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದಿಂದ ಸ್ವರಾಜ್ಯ ಮೈದಾನದವರೆಗೆ ಶೋಭಾಯಾತ್ರೆ ನಡೆಯಲಿದ್ದು, ಸಂಜೆ 6:30ರಿಂದ ಹಿಂದೂ ಬಾಂಧವರಿಗಾಗಿ ಪುರುಷರ ರಾಜ್ಯ ಮಟ್ಟದ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಹಾಗೂ ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು. ಸಮಾವೇಶದ ಆಮಂತ್ರಣ ಪತ್ರಿಕೆಯನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು.





