ನರ್ಸರಿಯಿಂದಲೇ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸಲು ಆದೇಶ : ಆರೆಸ್ಸೆಸ್ ಗೇ ಪಾಠ ಕಲಿಸಲು ಹೊರಟರೇ ಯೋಗಿ ?

ಲಕ್ನೋ,ಎ.8 ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಆದಿತ್ಯನಾಥ್ ಅಚ್ಚರಿಗಳನ್ನು ನೀಡುವುದರಲ್ಲಿ ನಿಪುಣರು. ಅವರ ಆಡಳಿತದಡಿಯಲ್ಲಿ ಬಿಜೆಪಿಯು ಸಂಘದ ಅಜೆಂಡಾವನ್ನು ರಾಜ್ಯದಲ್ಲಿ ಜಾರಿಗೊಳಿಸಲು ಸರ್ವ ಪ್ರಯತ್ನ ನಡೆಸಬಹುದೆಂದುಕೊಂಡವರಿಗೆ ಅವರು ಆಘಾತ ನೀಡಿದ್ದಾರೆ. ನರ್ಸರಿಯಿಂದಲೇ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸಬೇಕೆಂದು ಅವರು ಹೇಳಿದ್ದಾರೆ.
ಸಂಘ ಪರಿವಾರದ ಇಂಗ್ಲಿಷ್ ವಿರೋಧಿ ನೀತಿ ಸರ್ವವಿದಿತ. ಶಿಕ್ಷಣದ ಎಲ್ಲಾ ಹಂತಗಳಲ್ಲಿ ಆಂಗ್ಲ ಮಾಧ್ಯಮವನ್ನು ಹಂತಹಂತವಾಗಿ ಅಂತ್ಯಗೊಳಿಸಬೇಕೆಂದು ಕಳೆದ ವರ್ಷ ಆರೆಸ್ಸೆಸ್ ಪ್ರೇರಿತ ಸಂಸ್ಥೆ ಶಿಕ್ಷಾ ಸಂಸ್ಕೃತಿ ಉತ್ಥಾನ್ ನ್ಯಾಸ್ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೆ ಬರೆದ ಪತ್ರವೊಂದರಲ್ಲಿ ಹೇಳಿತ್ತು. ಭಾರತೀಯ ಭಾಷೆಗಳಿಗೆ ಪ್ರಾಧಾನ್ಯತೆ ನೀಡುವ ಹೊಸ ಶಿಕ್ಷಣ ನೀತಿಯನ್ನು ಸರಕಾರ ಜಾರಿಗೆ ತರಬೇಕು ಎಂಬುದು ಸಂಸ್ಥೆಯ ಉದ್ದೇಶವಾಗಿತ್ತಲ್ಲದೆ ಐಐಟಿ ಹಾಗೂ ಐಐಎಂಗಳು ಪ್ರಾದೇಶಿಕ ಭಾಷೆಗಳಿಗೆ ಒತ್ತು ನೀಡಬೇಕೆಂದು ಬಯಸಿತ್ತು.
ಈ ತಿಂಗಳಾರಂಭದಲ್ಲಿ ಗೋವಾದಲ್ಲಿರುವ ಸಂಘದ ಇನ್ನೊಂದು ಸಂಸ್ಥೆ ಭಾರತೀಯ ಭಾಷಾ ಸುರಕ್ಷಾ ಮಂಚ್ ಕೂಡ ರಾಜ್ಯದಲ್ಲಿ ಆಂಗ್ಲ ಮಾಧ್ಯ ಶಾಲೆಗಳಿಗೆ ನೀಡಲಾಗುವ ಅನುದಾನವನ್ನು ಹಿಂಪಡೆಯಬೇಕೆಂದು ಹಾಗೂ ಸ್ಥಳೀಯ ಭಾಷೆಗೆ ಮಹತ್ವ ನೀಡಬೇಕೆಂದು ಆಗ್ರಹಿಸಿತ್ತು. ಆಂಗ್ಲ ಭಾಷೆ ಭಾರತಕ್ಕೆ ಬಹಳಷ್ಟು ನಷ್ಟ ಉಂಟು ಮಾಡಿದೆ ಎಂದು ಕೆಲ ವರ್ಷಗಳ ಹಿಂದೆ ಹಿರಿಯ ಬಿಜೆಪಿ ನಾಯಕರೊಬ್ಬರು ಹೇಳಿದ್ದರು. ಅವರ ಈ ಹೇಳಿಕೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಬೆಂಬಲ ಕೂಡ ಪಡೆದಿತ್ತು.
ನಿಜ ಹೇಳಬೇಕೆಂದರೆ ಶಿಕ್ಷಣದಲ್ಲಿ ಆಂಗ್ಲ ಭಾಷಾ ಮಾಧ್ಯಮವನ್ನು ಕೈಬಿಡಬೇಕೆಂದು ಹೇಳುವುದೇ ಬಾಲಿಶ. ಜಾಗತಿಕ ಮಟ್ಟದಲ್ಲಿ ವಿವಿಧ ದೇಶಗಳ ಜನರೊಂದಿಗೆ ಸಂವಹನ ನಡೆಸುವಾಗ ಆಂಗ್ಲ ಭಾಷೆಯ ಮಹತ್ವವನ್ನು ಅಲ್ಲಗಳೆಯುವ ಪ್ರಶ್ನೆಯೇ ಇಲ್ಲ.
ಆರೆಸ್ಸೆಸ್ ಸಂಘಟನೆಯ ಇಂಗ್ಲಿಷ್ ವಿರೋಧಿ ಧೋರಣೆಯು ಒಪ್ಪತಕ್ಕಂತಹದ್ದಲ್ಲವೆಂದು ಬಿಜೆಪಿಗೆ ಗೊತ್ತಿಲ್ಲದೇ ಇಲ್ಲ. ಇದೀಗ ಬಿಜೆಪಿ ಸರಕಾರವೇ ಅಧಿಕಾರದಲ್ಲಿರುವುದರಿಂದ ಈ ವಿಚಾರದಲ್ಲಿ ಒಂದು ಸ್ಪಷ್ಟ ನಿಲುವು ತಳೆಯುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಹೇಗೆ ಮುಂದಡಿಯಿಡಬೇಕೆಂಬುದನ್ನು ಯೋಗಿ ಆದಿತ್ಯನಾಥ್ ತೋರಿಸಿದ್ದಾರೆ.
‘‘ಸರ್ಕಾರಿ ಶಾಲೆಗಳಲ್ಲಿ ನರ್ಸರಿ ಹಂತದಿಂದಲೇ ಇಂಗ್ಲಿಷ್ ಕಲಿಸಲು ನಾವು ನಿರ್ಧರಿಸಿದ್ದೇವೆ. ಈ ಭಾಷೆ ಕಲಿಯಲು ಅವರೇಕೆ ಆರನೇ ತರಗತಿ ತನಕ ಕಾಯಬೇಕು ಎಂಬುದಕ್ಕೆ ನನಗೆ ಯಾವುದೇ ಕಾರಣ ಹೊಳೆಯುತ್ತಿಲ್ಲ,’’ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ. ಪ್ರಖರ ಹಿಂದುತ್ವವಾದಿಯೆನಿಸಿದ ನಾಯಕರೊಬ್ಬರಿಂದ ಇಂತಹ ಹೇಳಿಕೆ ಆಶ್ಚರ್ಯವೇ ಸರಿ. ಮಠವೊಂದರ ಮುಖ್ಯಸ್ಥ, ಹಿಂದುತ್ವವಾದಿ ಯುವಜನರ ಸಂಘಟನೆಯೊಂದರ ಮುಖಂಡ ಹಾಗೂ ಯಾವತ್ತೂ ಕೇಸರಿ ವಸ್ತ್ರಧಾರಿಯಾಗಿರುವ ವ್ಯಕ್ತಿಯೊಬ್ಬರಿಂದ ಇಂತಹ ಒಂದು ಪ್ರಗತಿಪರ ನಿಲುವು ಅನಿರೀಕ್ಷಿತ. ಇಂತಹ ಒಂದು ಹಿನ್ನೆಲೆಯಿರುವ ವ್ಯಕ್ತಿ ಸಂಸ್ಕೃತವನ್ನು ಉತ್ತೇಜಿಸಬೇಕಿತ್ತಲ್ಲವೇ ?
ಯೋಗಿ ಒಬ್ಬ ವಿಭಿನ್ನ ವ್ಯಕ್ತಿತ್ವ. ಅವರು ಕಠಿಣ ನಿಲುವು ಹೊಂದಿರುವವರು ಹಾಗೂ ಒತ್ತಡಗಳಿಗೆ ಮಣಿಯುವವರಲ್ಲ. ರಾಜ್ಯವನ್ನು ಆಳುವ ವಿಚಾರದಲ್ಲಿ ಅವರು ಆರೆಸ್ಸೆಸ್ ಅಥವಾ ಅದರ ಸಹಸಂಘಟನೆಗಳ ಯಾವುದೇ ಒತ್ತಡಗಳಿಗೆ ಬಗ್ಗುವ ಸಾಧ್ಯತೆ ಕಡಿಮೆ. ಇಂಗ್ಲಿಷ್ ವಿಚಾರದಲ್ಲಿ ಅವರ ನಿರ್ಧಾರ ಆರೆಸ್ಸೆಸ್ ಮತ್ತು ಸಹ ಸಂಘಟನೆಗಳಿಗೆ ಒಂದು ನೇರ ಸಂದೇಶ ನೀಡುತ್ತದೆ- ದೂರವಿರಿ.
ಅವರು ಇಂತಹುದೇ ಸಂದೇಶವನ್ನು ಹಿಂದುತ್ವದ ಹೆಸರಿನಲ್ಲಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಗೋರಕ್ಷಕರು ಮತ್ತಿತರ ಸಂಘಟನೆಗಳಿಗೆ ನೀಡಿದರೆ ಅದು ಇತರ ಬಿಜೆಪಿ ಸರಕಾರಗಳಿಗೆ ಸರಿಯಾದ ದಾರಿತೋರಿಸಿದಂತಾಗುವುದು. ಇಂದು ಬಿಜೆಪಿಗೆ ಎಡಪಂಥೀಯರು ಯಾ ಜಾತ್ಯತೀತರಿಂದ ಯಾವುದೇ ದೊಡ್ಡ ಬೆದರಿಕೆಯಿಲ್ಲ ಬದಲಾಗಿ ಕಾನೂನಿಗೆ ಚಿಕ್ಕಾಸೂ ಬೆಲೆ ನೀಡದ ಹಿಂದುತ್ವ ಸಂಘಟನೆಗಳಿಂದ ಪಕ್ಷ ಅಪಾಯವೆದುರಿಸುತ್ತಿದೆ. ಇಂತಹ ಸಂಘಟನೆಗಳಿಗೆ ಬಿಜೆಪಿ ಒಂದು ರೇಖೆ ಎಳೆಯಲೇ ಬೇಕಾಗಿದೆ. ಈ ನಿಟ್ಟಿನಲ್ಲಿ ಸರಿಯಾದ ದಾರಿ ತೋರಿಸಲು ಮುಖ್ಯಮಂತ್ರಿ ಆದಿತ್ಯನಾಥ್ ಅವರು ಅತ್ಯಂತ ಸೂಕ್ತ ವ್ಯಕ್ತಿ.







