ಬಿಐಟಿ ಒಂದು ಮಾದರಿ ಸಂಸ್ಥೆ : ಪ್ರೊ. ನರೇಂದ್ರ ಎಲ್ ನಾಯಕ್
ಬಿಐಟಿ-ಬೀಡ್ಸ್ ವಾರ್ಷಿಕ ಉತ್ಸವ 2017

ಮಂಗಳೂರು,ಎ.8: ಬಿಐಟಿ-ಬೀಡ್ಸ್ ಉತ್ಸವ 2017 ಇನೋಳಿ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್ ಆವರಣದಲ್ಲಿ ಆರಂಭಗೊಂಡಿತು.
ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಇನ್ಫೋಸಿಸ್ ಮಂಗಳೂರು ವಿಭಾಗದ ಮುಖ್ಯಸ್ಥ ಗೋಪಿಕೃಷ್ಣನ್ ಕೊನ್ನತ್ ಮಾತನಾಡುತ್ತಾ, ತಾಂತ್ರಿಕತೆಯಲ್ಲೂ ಹೊಸತನ ಸೃಜನಶೀಲತೆಯನ್ನು ಕಾಲ ಕಾಲಕ್ಕೆ ತಕ್ಕಂತೆ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ. ಇಂದಿನ ಯುಗದಲ್ಲಿ ತಾಂತ್ರಿಕತೆಯೇ ಒಂದು ಉದ್ಯಮವಾಗಿದೆ. ಇತರರಿಗಿಂತ ಭಿನ್ನವಾಗಿ ಯೋಚಿಸುವುದು ಮತ್ತು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಕಲೆ ಜ್ಞಾನ , ಜನರನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ತಾಂತ್ರಿಕ ಕ್ಷೇತ್ರದಲ್ಲೂ ಯಶಸ್ಸು ಸಾಧಿಸಲು ಪೂರಕವಾದ ಅಂಶಗಳಾಗಿವೆ ಎಂದು ಅವರು ತಿಳಿಸಿದರು.
ಸಾಕಷ್ಟು ಕಂಪೆನಿಗಳು ಬದಲಾಗುತ್ತಿರುವ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳದೇ ಹೋದ ಪರಿಣಾಮವಾಗಿ ಮುಚ್ಚಿಹೋದ ಉದಾಹರಣೆಗಳಿವೆ. ಐ.ಟಿ ಕ್ಷೇತ್ರದಲ್ಲೂ ಸಾಕಷ್ಟು ಹೊಸ ತಾಂತ್ರಿಕತೆಗಳನ್ನು ಬಳಸಿಕೊಂಡ ಸಂಸ್ಥೆಗಳು ಯಶಸ್ಸು ಗಳಿಸಿರುವುದನ್ನು ಗಮನಿಸಬಹುದು. ಉನ್ನತ ಕನಸುಗಳೊಂದಿಗೆ ನಿರ್ದಿಷ್ಟ ಕಾರ್ಯಯೋಜನೆಯ ಮೂಲಕ ಯಶಸ್ಸು ಗಳಿಸಲು ಸಾಧ್ಯ ಎಂದು ಗೋಪಿಕೃಷ್ಣನ್ ಕೊನ್ನತ್ ತಿಳಿಸಿದ್ದಾರೆ.
ಸತತ ಪರಿಶ್ರಮದಿಂದ ಯಶಸ್ಸುಗಳಿಸಲು ಸಾಧ್ಯ ಎನ್ನವುದಕ್ಕೆ ಬ್ಯಾರೀಸ್ ಸಮೂಹ ಸಂಸ್ಥೆಯ ಮೂಲಕ ಉನ್ನತ ಸಾಧನೆ ಮಾಡಿದ ಸೈಯ್ಯದ್ ಮುಹಮ್ಮದ್ ಬ್ಯಾರಿ ಓರ್ವ ಮಾದರಿ ವ್ಯಕ್ತಿಯಾಗಿದ್ದಾರೆ. ಬಿಐಟಿ ಒಂದು ಮಾದರಿ ಸಂಸ್ಥೆಯಾಗಿದೆ ಎಂದು ಎಕ್ಸ್‌ಫರ್ಟ್ ಸಂಸ್ಥೆಯ ಅಧ್ಯಕ್ಷ ನರೇಂದ್ರ ನಾಯಕ್ ತಿಳಿಸಿದ್ದಾರೆ.
ಭಾರತ ವಿಶ್ವ ದಲ್ಲಿಯೇ ಮೂಲ್ಯವಾದ ಯುವ ಮಾನವ ಸಂಪತ್ತನ್ನು ಹೊಂದಿರುವ ದೇಶವಾಗಿದೆ . ಸ್ವಯಂ ಶಿಸ್ತಿನ ಕೊರತೆಯಿಂದಾಗಿ ನಮ್ಮ ದೇಶದಲ್ಲಿ ನಾವು ನಿರೀಕ್ಷಿತ ಯಶಸ್ಸುಗಳಿಸಲು ಸಾಧ್ಯ ವಾಗಿಲ್ಲ. ಮಾತಿನಂತೆ ನಮ್ಮ ಕೃತಿ ಇದ್ದಾಗ ಉತ್ತಮ ವ್ಯಕ್ತಿಗಳಾಗಲು ಸಾಧ್ಯ.ಶಿಕ್ಷಣ ಕೇಂದ್ರಗಳು ಸಮಾಜದ ಇತರ ಎಲ್ಲಾ ಕೇಂದ್ರಗಳಿಗಿಂತಲೂ ಪ್ರಮುಖವಾಗಿದೆ ಎಂದು ಬಿಐಟಿ - ಬೀಡ್ಸ್ ಸಂಸ್ಥೆಯ ವಾರ್ಷಿಕೋತ್ಸವಕ್ಕೆ ಅವರು ಶುಭಕೋರಿದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಬ್ಯಾರೀಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸೈಯ್ಯದ್ ಮುಹಮ್ಮದ್ ಬ್ಯಾರಿ ಮಾತನಾಡುತ್ತಾ,ಶಿಕ್ಷಣ ಸಂಸ್ಥೆಗಳು ವ್ಯಕ್ತಿಯ ವ್ಯಕ್ತಿತ್ವ ನಿರ್ಮಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಬೇಕು. ವಿದ್ಯಾರ್ಥಿಗಳು ಇಂಜಿನಿಯರ್, ಡಾಕ್ಟರ್ ಗಳಾಗುವ ಜೊತೆಗೆ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ಸಂಪಾದನೆ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಸಮಾಜದಲ್ಲಿ ಇತರರಿಗೆ ನೋವುಂಟು ಮಾಡದೆ ಪರೋಪಕಾರಿಯಾಗಿ ಬದುಕುವುದು ಮುಖ್ಯ ಇದಕ್ಕಾಗಿ ಪರಿಶುದ್ಧವಾದ ಮನಸ್ಸು ಮತ್ತು ಹೃದಯವಂತಿಕೆ ಬೇಕು ಎಂದು ಮುಹಮ್ಮದ್ ಬ್ಯಾರಿ ತಿಳಿಸಿದ್ದಾರೆ.
ದೇಶದ ರಕ್ಷಣೆಗಾಗಿ ಸೈನ್ಯ ಸೇರುವುದು, ಶಿಕ್ಷಕರಾಗಿ ಸೇವೆ ಸಲ್ಲಿಸುವುದು,ಐಎಎಸ್-ಐಪಿಎಸ್ ಮೊದಲಾದ ನಾಗರಿಕ ಸೇವೆ,ಉನ್ನತ ಶಿಕ್ಷಣ ಕ್ಷೇತ್ರ,ಹಾಗೂ ಇತರ ಉದ್ಯೋಗವಕಾಶವಿರುವ ಕಡೆ ಯುವ ಜನರು ದುಡಿಯಬೇಕು. ಪಾಲಿಟೆಕ್ನಿಕ್ ಮೂಲಕ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅಧ್ಯಯನ ನಡೆಸುವುದರಿಂದ ತಾಂತ್ರಿಕ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಸಾಧ್ಯ ಎಂದು ಮುಹಮ್ಮದ್ ಬ್ಯಾರಿ ತಿಳಿಸಿದ್ದಾರೆ.
ಬ್ಯಾರೀಸ್ ಸಮೂಹ ಸಂಸ್ಥೆಗಳ ಟ್ರಸ್ಟಿ ಮಝರ್ ಬ್ಯಾರಿ ,ಬೀಡ್ಸ್ ಪ್ರಾಂಶುಪಾಲ ಬಾವಿಶ್ ಮೆಹ್ತಾ,ಬಿಐಟಿ ಪಾಲಿಟೆಕ್ನಿಕ್‌ನ ಪಾಂಶುಪಾಲ ಅಝೀಝ್ ಮುಸ್ತಾಫ, ಬಿಐಟಿ-ಬಿಡ್ಸ್ ಉತ್ಸವದ ಸಂಯೋಜಕ ಶಮೀಮ್ ಖ್ಯಾತ ಗಾಯಕ ಮಸೂದ್ ಅಲಿ ಸಮಾರಂಭದಲ್ಲಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ವಿವಿಧ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಬಿಐಟಿ ಪಾಂಶುಪಾಲ ಡಾ.ಅಬ್ದುಲ್ ಕರೀಂ ವರದಿ ವಾಚಿಸಿದರು. ಮುಸ್ತಾಫ ಬಸ್ತಿಕೋಡಿ ಸ್ವಾಗತಿಸಿದರು.







