ಮಾದಕವಸ್ತು ಪ್ರಕರಣದಲ್ಲಿ ಸಾವಿನ ಮೊನೆಯಿಂದ ಪಾರಾದ ಭಾರತೀಯರು: ಕುವೈಟ್‌ನಲ್ಲಿ ಮರಣದಂಡನೆ,ಜೀವಾವಧಿಯಾಯಿತು!

ಕುವೈಟ್‌ಸಿಟಿ, ಎ.8 : ಕುವೈಟ್‌ನಲ್ಲಿ ಮಾದಕವಸ್ತು ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಮೂವರು ಕೇರಳದ ವ್ಯಕ್ತಿಗಳ ಶಿಕ್ಷೆಯನ್ನು ಕುವೈಟ್ ಸುಪ್ರೀಂಕೋರ್ಟ್ ಜೀವಾವಧಿ ಶಿಕ್ಷೆಗೆ ಇಳಿಸಿ ತೀರ್ಪು ನೀಡಿದೆ. ಸುಪ್ರೀಂಕೋರ್ಟಿನಿಂದ ಶಿಕ್ಷೆ ಕಡಿತಕ್ಕೊಳಗಾದವರನ್ನು ಕಾಸರಗೋಡಿನ ಅಬೂಬಕರ್ ಸಿದ್ದೀಕ್(21), ಪಾಲಕ್ಕಾಡ್‌ನ ಮುಸ್ತಫಾಶಾಹುಲ್ ಹಮೀದ್(41) ಮತ್ತು ಮಲಪ್ಪುರಂನ ಫೈಝಲ್(33) ಎಂದು ಗುರುತಿಸಲಾಗಿದೆ.
ಸುಪ್ರೀಂಕೋರ್ಟು ಇವರಿಗೆ ಕ್ರಿಮಿನಲ್ ಕೋರ್ಟು ನೀಡಿದ್ದ ಮರಣದಂಡನೆಯನ್ನು ರದ್ದುಪಡಿಸಿ ಜೀವಾವಧಿ ಶಿಕ್ಷೆಗೆ ಇಳಿಕೆ ಮಾಡಿದೆ. ಇನ್ನೊಬ್ಬ ಆರೋಪಿ ಶ್ರೀಲಂಕಾ ಪ್ರಜೆ ಶುಕ್ಲಿಯ ಸಂಪತ್‌ರ ಮರಣದಂಡನೆ ಜೀವಾವಧಿಶಿಕ್ಷೆಯಾಗಿ ಪರಿವರ್ತಿಸಲಾಗಿದೆ. 2015 ಎಪ್ರಿಲ್ 19ಕ್ಕೆ ಆರೋಪಿಗಳಿಂದ ನಾಲ್ಕುಕಿಲೊ ಹೆರಾಯಿನ್ ವಶಪಡಿಸಿಕೊಳ್ಳಲಾಗಿತ್ತು. ವಿಮಾನ ನಿಲ್ದಾಣದಲ್ಲಿ ಬಂದಿಳಿದ ಆರೋಪಿಗಳಲ್ಲಿ ಒಬ್ಬರಿಂದ ಕಸ್ಟಮ್ಸ್ ಅಧಿಕಾರಿಗಳು ಮಾದಕವಸ್ತುವನ್ನು ವಶಪಡಿಸಿಕೊಂಡಿದ್ದರು.
ಈತನ ಮಾಹಿತಿಯಿಂದ ಜಲೀಬ್ ಅಲ್‌ಶೂಯೂಖ್ನ ವಾಸಸ್ಥಳಕ್ಕೆ ದಾಳಿ ಪೊಲೀಸರು ಹೆರಾಯಿನ್ ವಶಪಡಿಸಿಕೊಂಡಿದ್ದರು. ಕುವೈಟ್‌ನಲ್ಲಿ 1997ರಲ್ಲಿ ಕಾನೂನು ತಿದ್ದುಪಡಿ ತಂದು ಮಾದಕ ವಸ್ತುಪ್ರಕರಣದಲ್ಲಿ ಮರಣದಂಡನೆಯನ್ನು ಜಾರಿಗೆ ತರಲಾಗಿದೆ. ಈವರೆಗೆ ಇಂತಹ ಪ್ರಕರಣಗಳಲ್ಲಿ 10 ಮಂದಿಗೆ ಮರಣದಂಡನೆ ವಿಧಿಸಲಾಗಿದೆ.
2006 ರಲ್ಲಿ ಮರಣದಂಡನೆಗೆ ಈಡಾದ ಶಕರುಲ್ಲಾ ಅನ್ಸಾರಿ ಮಾದಕವಸ್ತು ಪ್ರಕರಣದಲ್ಲಿ ಮರಣದಂಡನೆಗೆ ಒಳಗಾದ ಏಕೈಕ ಭಾರತೀಯ ವ್ಯಕ್ತಿಯಾಗಿದ್ದಾನೆ.





