ಅತ್ತ್‌ಹೀದ್ ಕನ್ನಡಾನುವಾದ ಕೃತಿ ಬಿಡುಗಡೆ

ಮಂಗಳೂರು, ಎ.8: ಇಸ್ಲಾಮಿನ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಇಸ್ಲಾಮಿನ ನೈಜತೆಯನ್ನು ಪ್ರತಿಪಾದಿಸುವ ಅತ್ಯುತ್ತಮ ಕೃತಿಗಳ ರಚನೆ ಕಾಲದ ಬೇಡಿಕೆಯಾಗಿದೆ ಎಂದು ದೇರಳಕಟ್ಟೆ ಸಲಫಿ ಮಸೀದಿಯ ಖತೀಬ್ ಮೌಲವಿ ಅಬೂ ನಜೀಮ್ ಸ್ವಲಾಹಿ ಅಭಿಪ್ರಾಯಪಟ್ಟರು.
ಕರ್ನಾಟಕ ಸಲಫಿ ಫೌಂಡೇಶನ್‌ನ ರಿಯಾದ್ ಘಟಕದ ವತಿಯಿಂದ ಪ್ರಕಟಿತ ಹಿರಿಯ ಲೇಖಕ ಇಸ್ಮಾಯೀಲ್ ಶಾಫಿ ಕನ್ನಡಕ್ಕೆ ಅನುವಾದಿಸಿದ ಅತ್ತ್‌ಹೀದ್(Attauheed) ಕೃತಿ ಬಿಡುಗಡೆ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ನಗರದ ನೆಲ್ಲಿಕಾಯಿ ರಸ್ತೆಯ ದಾರುಲ್ ಖೈರ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಫೌಂಡೇಶನ್‌ನ ಅಧ್ಯಕ್ಷ ಮೂಸಾ ತಲಪಾಡಿ ಕೃತಿಯನ್ನು ಬಿಡುಗಡೆಗೊಳಿಸಿದರು.
ಎಸ್.ಕೆ.ಎಸ್.ಎಂ. ಕೇಂದ್ರ ಸಮಿತಿಯ ಅಧ್ಯಕ್ಷ ಯು.ಎನ್.ಅಬ್ದುಲ್ ರಝಾಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಬಶೀರ್ ಅಹ್ಮದ್ ಶಾಲಿಮಾರ್ ಮುಖ್ಯ ಅತಿಥಿಯಾಗಿದ್ದರು. ದಯಾ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಪಿ.ಪಿ.ಅಬ್ದುಲ್ಲತೀಫ್ ಮತ್ತು ಮೌಲವಿ ಶರೀಫ್ ಕುಂಜತ್ತಬೈಲ್ ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರೂಪಿಸಿದ ಪವಿತ್ರ ಸಂದೇಶ ಪತ್ರಿಕೆಯ ಸಂಪಾದಕ ಎಂ.ಜಿ.ಮುಹಮ್ಮದ್ ಸ್ವಾಗತಿಸಿ, ವಂದಿಸಿದರು.







