ಸುಪ್ರೀಂ ಕೋರ್ಟ್ ಆದೇಶ ಪಾಲಿಸಿಯೂ ಈ ಹೆದ್ದಾರಿ ಬಾರ್ ಬಂದ್ ಆಗಲಿಲ್ಲ . ಹೇಗೆ ಗೊತ್ತೇ ?

ಎರ್ಣಾಕುಲಂ,ಎ.8 : ಹೆದ್ದಾರಿಯಿಂದ 500 ಮೀಟರ್ ಪರಿಧಿಯೊಳಗಿರುವ ಮದ್ಯದಂಗಡಿಗಳಿಗೆ ನಿಷೇಧ ವಿಧಿಸಿರುವ ಸುಪ್ರೀಂ ಕೋರ್ಟ್ ಆಜ್ಞೆ ಪಾಲಿಸುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಕೇರಳದ ಎರ್ಣಾಕುಲಂ ಜಿಲ್ಲೆಯ ಉತ್ತರ ಪರವೂರ್ ಎಂಬಲ್ಲಿ ಇರುವ ಮದ್ಯದಂಗಡಿಯೊಂದು ಬರೋಬ್ಬರಿ 250 ಮೀಟರ್ ಉದ್ದದ ಹಾದಿಯನ್ನು ನಿರ್ಮಿಸಿದೆ.
ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ 150 ಮೀಟರ್ ದೂರವಿದ್ದ ಕಾರಣ ಸುಪ್ರೀಂ ಕೋರ್ಟ್ ಆದೇಶದನ್ವಯ ಎಪ್ರಿಲ್ 1ರಂದು ಮುಚ್ಚಲ್ಪಟ್ಟಿದ್ದ ಐಶ್ವರ್ಯ ಬಿಯರ್ ಮತ್ತು ವೈನ್ ಪಾರ್ಲರ್ ಇದೀಗ ಮತ್ತೆ ಕಾರ್ಯಾರಂಭಿಸಿದೆ. ಆದರೆ ಈಗ ಅದು ಹೆದ್ದಾರಿಯಿಂದ 520 ಮೀಟರ್ ದೂರದಲ್ಲಿದೆ. ಕಾರಣ ಈ ಬಾರ್ ಮಾಲಕರು ನಿರ್ಮಿಸಿದ ಹಾದಿ. ಈ ಹಾದಿಯ ಚಿತ್ರವನ್ನು ನೋಡಿದರಷ್ಟೇ ಈ ಬಾರ್ ಮಾಲಕರ ಬುದ್ಧಿಮತ್ತೆಯೇನೆಂದು ಎಲ್ಲರಿಗೂ ತಿಳಿಯುವುದು.
ಹಿರಿಯ ಅಧಿಕಾರಿಗಳ ಪ್ರಕಾರ ಬಾರ್ ಮಾಲಕರ ಈ ಕ್ರಮ ಕಾನೂನಿಗೆ ವಿರುದ್ಧವಾಗದು. ಸುಪ್ರೀಂ ಕೋರ್ಟ್ ನಿರ್ಣಯ ಜಾರಿಗೆ ಹೆದ್ದಾರಿಯಿಂದ ಬಾರ್ ಎಷ್ಟು ದೂರದಲ್ಲಿದೆಯೆಂದು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ, ಎಂದು ಅಬಕಾರಿ ಅಧಿಕಾರಿಗಳು ಹೇಳುತ್ತಾರೆ. ಆದರೆ ಬಾರ್ ಮುಖ್ಯದ್ವಾರದಲ್ಲಿ ಮಾಡಲಾದ ಬದಲಾವಣೆಗೆ ಅದರ ಮಾಲಕರು ದಂಡ ತೆರಬೇಕಾದೀತೆಂದು ಅಬಕಾರಿ ಹೆಚ್ಚುವರಿ ಆಯುಕ್ತ (ಜಾರಿ) ಎ ವಿಜಯನ್ ಹೇಳಿದ್ದಾರೆ.





