ಅಪಘಾತದಲ್ಲಿ ತನ್ನ ಪತಿಯ ನಿಧನದ ಬ್ರೇಕಿಂಗ್ ನ್ಯೂಸನ್ನು ಓದಿದ ಟಿವಿ ನಿರೂಪಕಿ !

ಹೊಸದಿಲ್ಲಿ, ಎ. 8 : ಟಿವಿಯಲ್ಲಿ ಸುದ್ದಿ ವಾಚಿಸುವುದು ಆಕೆಯ ಉದ್ಯೋಗ. ಶನಿವಾರ ಆಕೆ ಅದನ್ನೇ ಅತ್ಯಂತ ನಿಷ್ಠೆಯಿಂದ , ಸ್ಥಿತಪ್ರಜ್ಞಳಾಗಿ ನಿರ್ವಹಿಸಿದಳು. ಆದರೆ ಸುದ್ದಿಯಲ್ಲಿ ಒಂದು ದೊಡ್ಡ ವ್ಯತ್ಯಾಸವಿತ್ತು. ಅದು ಸಾಮಾನ್ಯ ಸುದ್ದಿಯಾಗಿರಲಿಲ್ಲ. ಅಪಘಾತದಲ್ಲಿ ಆಕೆಯ ಪತಿ ನಿಧನರಾದ ಸುದ್ದಿಯದು !
ಛತ್ತೀಸ್ ಗಢದ ಖಾಸಗಿ ಚಾನಲ್ ಐಬಿಸಿ -೨೪ ರಲ್ಲಿ ಸುದ್ದಿ ವಾಚಕಿಯಾಗಿರುವ ಸುರ್ಪ್ರೀತ್ ಕೌರ್ ಪಾಲಿಗೆ ಶನಿವಾರ ಕರಾಳ ಸುದ್ದಿ ಬಂದಿತ್ತು. ಮಹಾಸಮುಂದ್ ಜಿಲ್ಲೆಯಲ್ಲಿ ರೆನೊ ಡಸ್ಟರ್ ಒಂದು ಅಪಘಾತಕ್ಕೀಡಾಗಿ ತನ್ನ ಪತಿ ಮೃತಪಟ್ಟ ಸುದ್ದಿಯನ್ನು ವರದಿಗಾರನ ಮೂಲಕ ಪಡೆಯುತ್ತಿದ್ದಂತೆ ಲೈವ್ ಸುದ್ದಿ ವಾಚಿಸುವ ಕರ್ತವ್ಯದಲ್ಲಿದ್ದ ಕೌರ್ ಧೃತಿ ಗೆಡದೆ ಆ ಸುದ್ದಿಯನ್ನು ಓದಿ ಮುಗಿಸಿದ್ದಾರೆ.
ವಾಹನದಲ್ಲಿದ್ದ ಐದು ಮಂದಿಯ ಪೈಕಿ ಮೂವರು ಮೃತಪಟ್ಟಿದ್ದಾರೆ ಎಂದು ವರದಿಗಾರ ತಿಳಿಸಿದ್ದ. ಆದರೆ ಮೃತಪಟ್ಟವರ ವಿವರ ಹೇಳಿರಲಿಲ್ಲ. ಆದರೆ ಉಳಿದ ವಿವರಗಳಿಂದಲೇ ಮೃತಪಟ್ಟಿರುವುದು ತನ್ನ ಪತಿಯೇ ಎಂಬುದು ಕೌರ್ ಗೆ ಸ್ಪಷ್ಟವಾಗಿತ್ತು. ಏಕೆಂದರೆ ಆತ ಅದೇ ಸಮಯದಲ್ಲಿ ಆ ಪ್ರದೇಶದಲ್ಲಿ , ಅದೇ ವಾಹನದಲ್ಲಿ ಇರುವುದು ಆಕೆಗೆ ಗೊತ್ತಿತ್ತು. ಸುದ್ದಿ ಸಂಪೂರ್ಣ ಓದಿ ಮುಗಿಸಿ ಸ್ಟುಡಿಯೋದಿಂದ ಹೊರ ಬಂದ ಮೇಲೆ ಕೌರ್ ಶೋಕ ಸಾಗರದಲ್ಲಿ ಮುಳುಗಿದ್ದರು. ಆ ಬಳಿಕ ಆಕೆ ತನ್ನ ಸಂಬಂಧಿಕರನ್ನು ಸಂಪರ್ಕಿಸಿದರು.
ಕೌರ್ ತೋರಿಸಿದ ಧೈರ್ಯ ಹಾಗು ವೃತ್ತಿಪರತೆ ಆಕೆಯ ಸಹೋದ್ಯೋಗಿಗಳನ್ನು ದಂಗು ಬಡಿಸಿದೆ. " ಆಕೆ ಅತ್ಯಂತ ಧೈರ್ಯದ ಮಹಿಳೆ . ಆಕೆಯ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ. ಆದರೆ ಇವತ್ತು ಮಾತ್ರ ಆಕೆಗೆ ಅತ್ಯಂತ ಕರಾಳ ದಿನ . ನಮಗೆಲ್ಲರಿಗೂ ಇದು ತೀವ್ರ ಆಘಾತ ಉಂಟು ಮಾಡಿದೆ " ಎಂದು ಆಕೆಯ ಸಹೋದ್ಯೋಗಿಗಳು ಹೇಳಿದ್ದಾರೆ.







