ಭದ್ರಕ್ : ಫೇಸ್‌ಬುಕ್‌ನಲ್ಲಿ ಟೀಕೆಗಳನ್ನು ವಿರೋಧಿಸಿ ಪ್ರತಿಭಟನೆ,ಕರ್ಫ್ಯೂ ಜಾರಿ

ಭದ್ರಕ್(ಒಡಿಶಾ),ಎ.8: ಎರಡು ಸಮುದಾಯಗಳ ನಡುವೆ ಘರ್ಷಣೆಗಳ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆಯಿಂದ ಇಲ್ಲಿ ಕರ್ಫ್ಯೂ ಹೇರಲಾಗಿದ್ದು, ಶನಿವಾರ ಶಾಲಾ-ಕಾಲೇಜುಗಳು, ಮಾರುಕಟ್ಟೆಗಳು ಮುಚ್ಚಿದ್ದವು. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮ ನವಮಿಯ ಸಂದರ್ಭ ರಾಮ-ಸೀತೆ ಕುರಿತು ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ಗಳಿಂದ ಸೃಷ್ಟಿಯಾಗಿರುವ ವಿವಾದವನ್ನು ಬಗೆಹರಿಸಲು ನಡೆ ಮಾತುಕತೆಗಳು ವಿಫಲಗೊಂಡ ಬಳಿಕ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಕರ್ಫ್ಯೂ ಹೇರಲಾಗಿದೆ. ಈವರೆಗೆ 35 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ದಿಲ್ಲಿಗೆ ಐದು ದಿನಗಳ ಪ್ರವಾಸಕ್ಕಾಗಿ ತೆರಳಿರುವ ಒಡಿಶಾ ಮುಖ್ಯಮಂತ್ರಿ ನವೀನ ಪಟ್ನಾಯಕ್ ಅವರು, ಶಾಂತಿ ಮತ್ತು ಸೌಹಾರ್ದತೆಯನ್ನು ಕಾಯ್ದುಕೊಳ್ಳುವಂತೆ ಟ್ವಿಟರ್ ಮೂಲಕ ಜನರನ್ನು ಕೋರಿಕೊಂಡಿದ್ದಾರೆ.
ಹಿಂದು ದೇವತೆಗಳ ವಿರುದ್ಧ ನಿಂದನಾತ್ಮಕ ಫೇಸಬುಕ್ ಪೋಸ್ಟ್‌ಗಳಿಂದ ಕೆರಳಿದ ಬಜರಂಗ ದಳ, ವಿಹಿಂಪ ಮತ್ತು ಶ್ರೀರಾಮನವಮಿ ಸಮಿತಿ ಸದಸ್ಯರು ನಿನ್ನೆ ಸಂಜೆ ಭದ್ರಕ್ ಪೊಲೀಸ್ ಠಾಣೆಯೆದುರು ಪ್ರತಿಭಟನೆ ನಡೆಸಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ ಬಳಿಕ ಬೀದಿಗಿಳಿದು ಟೈರ್‌ಗಳನ್ನು ಸುಟ್ಟಿದ್ದಲ್ಲದೆ,ಅಂಗಡಿಗಳನ್ನು ಧ್ವಂಸಗೊಳಿಸಿದ್ದರು.
ಪೊಲೀಸರೊಂದಿಗೆ ಘರ್ಷಣೆಗಿಳಿದ ಪ್ರತಿಭಟನಾಕಾರರು ಅವರತ್ತ ಕಲ್ಲುತೂರಾಟವನ್ನೂ ನಡೆಸಿದ್ದರು. ಘಟನೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಯೋರ್ವರು ಗಾಯಗೊಂಡಿದ್ದು, ಪೊಲೀಸ್ ವಾಹನವೊಂದನ್ನು ಜಖಂಗೊಳಿಸಲಾಗಿದೆ. ಭದ್ರಕ್ ಮುಸ್ಲಿಂ ಜಮಾಅತ್ ಶ್ರೀರಾಮನ ವಿರುದ್ಧ ಹೇಳಿಕೆಯನ್ನು ಖಂಡಿಸಿದೆ,ಡಿಜಿಪಿ ಮತ್ತು ಗೃಹ ಕಾರ್ಯದರ್ಶಿ ಶನಿವಾರ ಭದ್ರಕ್‌ಗೆ ಭೇಟಿ ನೀಡಿ ಪರಿಶೀಲಿಸಿದ್ದು, ಶಾಂತಿ ಕಾಯ್ದುಕೊಳ್ಳುವಂತೆ ಜನರನ್ನು ಕೋರಿದ್ದಾರೆ.







