ಅಂ.ರಾ. ಚೆಫ್ ವಿಕಾಸ್ ಖನ್ನಾರ "ಉತ್ಸವ" ಕೃತಿ ಅನಾವರಣ
ಚಿನ್ನದ ಅಂಚುಳ್ಳ, 16 ಕೆ.ಜಿ. ತೂಗುವ, 1,200 ಪುಟಗಳ ಗ್ರಂಥ

ಮಣಿಪಾಲ, ಎ.8: ವಿಶ್ವದ ಖ್ಯಾತನಾಮ ಚೆಫ್ (ಬಾಣಸಿಗ) ಹಾಗೂ ಮಣಿಪಾಲದ ವೆಲ್‌ಕಮ್ ಗ್ರೂಪ್ ಗ್ರಾಜ್ಯುವೆಟ್ ಸ್ಕೂಲ್ ಆಫ್ ಹೊಟೇಲ್ ಅಡ್ಮಿನಿಸ್ಟ್ರೇಶನ್‌ನ ಹಳೆ ವಿದ್ಯಾರ್ಥಿ ವಿಕಾಸ್ ಖನ್ನಾ ಅವರ ಅಡುಗೆಗಳ ಕುರಿತ ಬೃಹತ್ ಗ್ರಂಥ "ಉತ್ಸವ್" ಕೆಎಂಸಿ ಗ್ರೀನ್ಸ್‌ನಲ್ಲಿ ನಡೆದ ಸಮಾರಂಭದಲ್ಲಿ ಅನಾವರಣಗೊಂಡಿತು.
ಚಿನ್ನದ ಅಂಚುಳ್ಳ, 16 ಕೆ.ಜಿ. ತೂಗುವ, 1,200 ಪುಟಗಳ ಈ ಗ್ರಂಥವನ್ನು ಮಣಿಪಾಲ ವಿವಿಯ ವಾರ್ಷಿಕ "ಉತ್ಸವ್-2017"ರಲ್ಲಿ ಬಿಡುಗಡೆಗೊಳಿಸಲಾಯಿತು. ಕೃತಿಕಾರ ವಿಕಾಸ್ ಖನ್ನಾ ಅವರು ಕೃತಿಯ ಒಂದು ಪ್ರತಿಯನ್ನು ಮಣಿಪಾಲ ವಿವಿಯ ಚಾನ್ಸಲರ್ ಡಾ.ರಾಮದಾಸ ಎಂ. ಪೈ ಅವರಿಗೆ ಅರ್ಪಿಸಿದರು. ವಿಕಾಸ ಖನ್ನಾರೊಂದಿಗೆ ಅವರ ತಾಯಿ ಬಿಂದು ಖನ್ನಾ ಉಪಸ್ಥಿತರಿದ್ದರು.
ಖನ್ನಾ ಅವರು ತನ್ನ ಈ ಮಹತ್ವಾಕಾಂಕ್ಷಿ ಪುಸ್ತಕವನ್ನು ಪ್ರಧಾನಿ ನರೇಂದ್ರ ಮೋದಿ, ರಾಣಿ ಎಲಿಜಬೆತ್ 2 ಹಾಗೂ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅಲ್ಲದೇ ವಿಶ್ವದ ಗಣ್ಯ ನಾಯಕರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಪುಸ್ತಕದಲ್ಲಿ ಭಾರತದಲ್ಲಿರುವ ಅಸಂಖ್ಯಾತ ಹಬ್ಬ, ಉತ್ಸವ, ಸಮಾರಂಭ, ಸಂಪ್ರದಾಯಗಳ ಸಂದರ್ಭದಲ್ಲಿ ತಯಾರಿಸುವ ವೈವಿಧ್ಯಮಯ ಅಡುಗೆಗಳು, ಅವುಗಳಿಗೆ ಬಳಸುವ ವಿವಿಧ ಸಾಂಬಾರ ಪದಾರ್ಥಗಳ ಕುರಿತು ಸಮಗ್ರ ವಿವರಣೆಗಳಿವೆ. ಈ ಕೃತಿಯನ್ನು ರಚಿಸಲು ವಿಕಾಸ ಖನ್ನಾ ಅವರು 12 ವರ್ಷಗಳನ್ನು ತೆಗೆದುಕೊಂಡಿದ್ದರು.
ಪುಸ್ತಕ ಅನಾವರಣ ಸಂದರ್ಭದಲ್ಲಿ ಡಾ.ರಾಮದಾಸ ಪೈ ಅವರ ಪತ್ನಿ ವಸಂತಿ ಆರ್.ಪೈ, ಮಣಿಪಾಲ ವಿವಿ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ವಾಗ್ಷಾದ ಪ್ರಾಂಶುಪಾಲೆ ಪ್ರೊ.ಪರ್ವತವರ್ಧಿನಿ ಮುಂತಾದವರು ಉಪಸ್ಥಿತರಿದ್ದರು.
ಇದೇ ವೇಳೆ ಲೇಖಕ ಕರಣ್ ಬೆಲ್ಲಾನಿ ರಚಿಸಿದ ವಿಕಾಸ್ ಖನ್ನಾ ಅವರ ಬಯೋಗ್ರಫಿ "ಬರೀಡ್ ಸೀಡ್ಸ್" ಗುರುವಾರ ಕೆಎಂಸಿ ಗ್ರೀನ್‌ನಲ್ಲಿ ಬಿಡುಗಡೆಗೊಂಡಿತ್ತು. ಇದೇ ಕೃತಿಯನ್ನು ಆಧರಿಸಿ "ಬರೀಡ್ ಸೀಡ್ಸ್" ಹೆಸರಿನ ಡಾಕ್ಯುಮೆಂಟರಿ ಚಿತ್ರದ ಚಿತ್ರೀಕರಣವೂ ಮಣಿಪಾಲದಲ್ಲಿ ನಡೆಯುತ್ತಿದೆ. ಅಮೆರಿಕನ್ ಚಿತ್ರದ ನಿರ್ದೇಶಕ ಆಂಡ್ರಿ ಸೆವರ್ನಿ ಈಗ ಮಣಿಪಾಲದಲ್ಲಿದ್ದು, ತನ್ನ ಚಿತ್ರೀಕರಣ ತಂಡದೊಂದಿಗೆ ಮಣಿಪಾಲ, ಉಡುಪಿ ಶ್ರೀಕೃಷ್ಣ ಮಠ, ಮಲ್ಪೆ ಹಾಗೂ ವಿಕಾಸ ಖನ್ನ ಓಡಾಡಿದ ಇತರ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಿದ್ದಾರೆ.
"ಈ ಕೃತಿಯು ಪಂಜಾಬ್‌ನ ಪುಟ್ಟ ಪಟ್ಟಣದಿಂದ ಮಣಿಪಾಲಕ್ಕೆ ಅಲ್ಲಿಂದ ಅಮೆರಿಕಕ್ಕೆ ನನ್ನ ಪಯಣವನ್ನು ತೆರೆದಿಡುತ್ತದೆ. ನನ್ನ ಈ ಬದುಕಿನ ಪಯಣದಲ್ಲಿ ಅನುಭವಿಸಿದ ಎಲ್ಲಾ ಏರಿಳಿತಗಳು ಇದರಲ್ಲಿ ಪ್ರತಿಫಲಿತವಾಗಿದೆ" ಎಂದು ವಿಕಾಸ ಖನ್ನಾ ನುಡಿದರು.







