ಕೇರಳದಲ್ಲಿ ಬೀದಿನಾಯಿಗಳಿಗೆ ಆಹಾರವಾದ 85ರ ವಯೋವೃದ್ಧ

ತಿರುವನಂತಪುರ,ಎ.8: ಜಿಲ್ಲೆಯ ಅಟ್ಟಿಂಗಾಲ್‌ನಲ್ಲಿ ಬೀದಿನಾಯಿಗಳು 85ರ ವಯೋವೃದ್ಧನನ್ನು ಕೊಂದು, ಶವವನ್ನು ಭಾಗಶಃ ತಿಂದು ಹಾಕಿವೆ ಎಂದು ಪೊಲೀಸರು ಶನಿವಾರ ತಿಳಿಸಿದರು. ಇದು ರಾಜ್ಯದಲ್ಲಿ ಬೀದಿನಾಯಿಗಳ ಹಾವಳಿಯನ್ನು ತಡೆಯಲು ಸರಕಾರದ ಹೆಣಗಾಟದ ನಡುವೆಯೇ ಈ ಪಿಡುಗಿಗೆ ಇತ್ತೀಚಿನ ಮಾನವ ಬಲಿಯಾಗಿದೆ ಕುಂಞಿಕೃಷ್ಣನ್ ಶುಕ್ರವಾರದಿಂದ ನಾಪತ್ತೆಯಾಗಿದ್ದು, ಶನಿವಾರ ಬೆಳಿಗ್ಗೆ ಅಟ್ಟಿಂಗಾಲ್‌ನ ಗದ್ದೆಯೊಂದರಲ್ಲಿ ಅವರ ಛಿದ್ರವಿಚ್ಛಿದ್ರ ಶವ ಪತ್ತೆಯಾಗಿದೆ.
ಕುಂಞಿಕೃಷ್ಣನ್ ಮೇಲೆ ನಾಯಿಗಳ ದಾಳಿ ನಡೆದಿದೆ ಎಂದು ಪ್ರಾಥಮಿಕ ವರದಿಗಳು ಸೂಚಿಸುತ್ತಿವೆ. ಮರಣೋತ್ತರ ಪರೀಕ್ಷೆಯ ಬಳಿಕವೇ ಹೆಚ್ಚಿನ ವಿವರಗಳು ಲಭ್ಯವಾಗಬೇಕಿವೆ ಎಂದು ಹಿರಿಯ ಪೊಲಿಸ್ ಅಧಿಕಾರಿಯೋರ್ವರು ತಿಳಿಸಿದರು.
ಈ ಘಟನೆಯು ಕ್ರುದ್ಧ ಜನರು ಬೀದಿನಾಯಿಗಳ ಮಾರಣಹೋಮಕ್ಕೆ ಮುಂದಾಗಬಹುದೆಂಬ ಆತಂಕವನ್ನು ಸೃಷ್ಟಿಸಿದೆ. ಈ ಕ್ರಮಕ್ಕೆ ಹಲವಾರು ಬೆಂಬಲಿಗರೂ ಇದ್ದು, ಕಳೆದ ವರ್ಷ ಬೀದಿನಾಯಿಗಳು ನಾಲ್ವರನ್ನು ಕೊಂದು ಹಾಕಿದ್ದವು. ಕೇಂದ್ರ ಸಚಿವೆ ಮೇನಕಾ ಗಾಂಧಿಯವರ ನೇತೃತ್ವದಲ್ಲಿ ಪ್ರಾಣಿಹಕ್ಕುಗಳ ಕಾರ್ಯಕರ್ತರು ಬೀದಿನಾಯಿಗಳ ಹತ್ಯೆಯನ್ನು ವಿರೋಧಿಸುತ್ತಿದ್ದಾರೆ.





