ಎ.14ರಂದು ಚಲೋ ಬೆಂಗಳೂರು: 15ರಿಂದ ಧರಣಿ

ಮಂಡ್ಯ, ಎ.8: ಅಂಬೇಡ್ಕರ್ ಜನ್ಮದಿನವನ್ನು ಜನತೆಯ ಹಕ್ಕುಗಳ ದಿನವನ್ನಾಗಿ ಆಚರಿಸುತ್ತಿದ್ದು, ಎ.14ರಂದು ಚಲೋ ಬೆಂಗಳೂರು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮುಖಂಡ ಸಿದ್ದರಾಜು ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಹಾಗೂ ಜನಾಂದೋಲನಗಳ ಮಹಾಮೈತ್ರಿ- ಈ ಮೂರು ಒಕ್ಕೂಟಗಳ ನೇತೃತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಗುಜರಾತಿನ ಊನಾ ಹೋರಾಟದ ರೂವಾರಿ, ದಲಿತ ಚಿಂತಕ ಜಿಗ್ನೇಶ್ ಮೇವಾನಿ ನೇತೃತ್ವದ ಚಲೋ ಬೆಂಗಳೂರು ಕಾರ್ಯಕ್ರಮ ನಿನ್ನೆ ದಿಡ್ಡಹಳ್ಳಿಯಲ್ಲಿ ಜಾಥಾದಿಂದ ಆರಂಭವಾಗಿತ್ತು. ಆದರೆ, ಸರಕಾರದ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ದಿಡ್ಡಳ್ಳಿ ಜನರ ಹಕ್ಕೊತ್ತಾಯ ಬಗೆಹರಿಸುವ ಸಂಬಂಧ ಎ.11ರಂದು ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ ಎಂದು ಭರವಸೆ ನೀಡಿದ್ದಾರೆ ಎಂದು ಸಿದ್ದರಾಜು ತಿಳಿಸಿದರು.
ಎ.15ರಿಂದ ಬೆಂಗಳೂರಿನ ಮೌರ್ಯ ಹೊಟೇಲ್ ಬಳಿಯ ಮಹಾತ್ಮ ಗಾಂಧಿ ಪ್ರತಿಮೆ ಎದುರು ಅನಿರ್ಧಿಷ್ಟಾವಧಿ ಧರಣಿ ಆರಂಭಿಸಲಾಗುವುದು. ಸ್ವಾತಂತ್ರ್ಯ ಹೋರಾಟಗಾರ ಡಾ.ಎಚ್.ಎಸ್.ದೊರೆಸ್ವಾಮಿ ಅವರ ನೇತೃತ್ವದಲ್ಲಿ ಭೂಮಿ ಮತ್ತು ವಸತಿಗಾಗಿ ನ್ಯಾಯ ಸಿಗುವ ತನಕ ಧರಣಿ ಮುಂದುವರಿಯಲಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಮುನ್ನಡೆ ಸಂಘಟನೆಯ ಜ್ಯೋತಿ, ಶ್ರಮಿಕ ನಗರ ನಿವಾಸಿಗಳ ಒಕ್ಕೂಟದ ಪ್ರಕಾಶ್, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಮುಹಮ್ಮದ್ ತಾಹಿರ್, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸೋಮಶೇಖರ್, ದಲಿತ ಸಂಘರ್ಷ ಸಮಿತಿಯ ಚಿಕ್ಕಾಡೆ ಮಹದೇವು, ಕರ್ನಾಟಕ ಜನಶಕ್ತಿಯ ಸಂತೋಷ್ಉಪಸ್ಥಿತರಿದ್ದರು.







