ಅಕ್ರಮ ಅಕ್ಕಿ ದಾಸ್ತಾನು: ದಾಳಿ ನಡೆಸಿದ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನ

ದಾವಣಗೆರೆ, ಎ.8: ಅಕ್ರಮ ಅಕ್ಕಿ ದಾಸ್ತಾನು ಮಾಡಿದ್ದ ಗೋದಾಮಿನ ಮೇಲೆ ದಾಳಿಗೆ ಮುಂದಾದ ಅಧಿಕಾರಿಗಳಿಗೆ ಹಣದ ಆಮಿಷ ಒಡ್ಡಿದ್ದಲ್ಲದೇ, ಹಲ್ಲೆಗೂ ಮುಂದಾದ ಘಟನೆ ದಾವಣಗೆರೆ ಬಳಿಯ ಹಳೇಬಾತಿಯಲ್ಲಿ ಶನಿವಾರ ನಡೆದಿದೆ.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಹಳೆಬಾತಿ ದರ್ಗಾದ ಪಕ್ಕದಲ್ಲಿರುವ ಉಮಾಪತಿ ಎಂಬವರಿಗೆ ಸೇರಿದ ಅಕ್ಕಿ ಗೋದಾಮು ಹಾಗೂ ಕೋಳಿ ಫಾರಂ ಮೇಲೆ ತಹಶೀಲ್ದಾರ್ ಸಂತೋಷ್ ಕುಮಾರ್, ಉಪವಿಭಾಗಾಧಿಕಾರಿ ಕುಮಾರಸ್ವಾಮಿ, ಕಂದಾಯ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಮಧ್ಯಾಹ್ನ ವೇಳೆ ದಾಳಿ ನಡೆಸಲಾಯಿತು.
ಈ ಸಂದರ್ಭ ಗೋದಾಮು ಮಾಲಕ ಉಮಾಪತಿ, ಆತನ ಪುತ್ರ ಸಂತೋಷ್ ಹಾಗೂ ಕಿರಣ್ ನಾಯ್ಕ ಎಂಬವರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ, ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲದೆ, ಸಾಗಾಟ ಮಾಡಲು ಹೊರಟಿದ್ದ ಲಾರಿಯನ್ನು ತಡೆಯಲು ಹೋದ ಅಧಿಕಾರಿಗಳ ಮೇಲೆಯೇ ಲಾರಿ ಹತ್ತಿಸಲು ಮುಂದಾದರು. ಅಧಿಕಾರಿಗಳು ಬಗ್ಗದಿದ್ದಾಗ, ಹಣದ ಆಮಿಷ ತೋರಿಸಿದ್ದಾರೆ ಎನ್ನಲಾಗಿದೆ.
ಉಮಾಪತಿ ಸುಮಾರು 15 ವರ್ಷಗಳಿಂದ ನಿರಂತರವಾಗಿ ಅಕ್ರಮ ಅಕ್ಕಿ ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ. ಈ ಕುರಿತು ಅನೇಕ ಬಾರಿ ದೂರು ದಾಖಲಿಸಿ, ಎಚ್ಚರಿಕೆ ನೀಡಿ ಬಂಧನ ನಡೆಸಿದರೂ ಜಾಮೀನಿನ ಮೂಲಕ ಹೊರ ಬಂದು ಮತ್ತೆ ಅದೇ ದಂಧೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗ ಹಲ್ಲೆಗೆ ಯತ್ನಿಸಿದ ಸಂತೋಷ್ ಹಾಗೂ ಕಿರಣ್ ನಾಯ್ಕ ಅವರನ್ನು ಬಂಧಿಸಲಾಗಿದ್ದು, ಮಾಲಕ ಉಮಾಪತಿ ತಲೆಮರೆಸಿಕೊಂಡಿದ್ದಾರೆ. ಅಕ್ಕಿ ಸಾಗಣೆಗೆ ಮತ್ತು ಎರಡು ಲಾರಿ, ಒಂದು ಟ್ರಾಕ್ಟ್ರರ್ ಸೇರಿದಂತೆ ಸುಮಾರು 560 ಚೀಲ ಅಕ್ಕಿ ವಶಪಡಿಸಿಕೊಳ್ಳಲಾಗಿದೆ.







