ಇತಿಹಾಸದ ಪುಟಗಳಲ್ಲಿ ಮರೆಯಾದ ರಹಸ್ಯ ಏಜೆಂಟ್ ರಹ್ಮತ್‌ಖಾನ್

ಒಮ್ಮೆ ಹಿಟ್ಲರ್, ಸೋವಿಯತ್ ಮೇಲೆ ಆಕ್ರಮಣ ನಡೆಸಲು ಅಪರೇಶನ್ ಬರ್ಬೊಸಾ ಕಾರ್ಯಾಚರಣೆ ಆರಂಭಿಸಿದ್ದ. ಖಾನ್ ರಹಸ್ಯವಾಗಿ ರಶ್ಯನ್ನರ ಜೊತೆ ಕೈಜೋಡಿಸಿದ್ದ ಹಾಗೂ ನಾಝಿಗಳನ್ನು ಮೂರ್ಖರನ್ನಾಗಿಸಿದ್ದ. ತದನಂತರ ಆತ ಬ್ರಿಟಿಷರ ಪರವಾಗಿ ಕೆಲಸ ಮಾಡಿದ್ದ. ಅಲ್ಲಿ ಆತನಿಗೆ ಸಿಲ್ವರ್ ಎಂದು ಹೆಸರು ನೀಡಿದ್ದರು. ಇತ್ತ ಜರ್ಮನರೂ ಆತನನ್ನು ಅತಿಯಾಗಿ ನಂಬಿದ್ದರು. ಖಾನ್‌ಗೆ ಜರ್ಮನಿಯ ಅತ್ಯುನ್ನತ ಮಿಲಿಟರಿ ಪದಕವಾದ ಐರನ್ ಕ್ರಾಸ್ ನೀಡಿ ಗೌರವಿಸಿದ್ದರು.
ರಹ್ಮತ್‌ಖಾನ್ ಬಹುಶಃ ಎರಡನೆ ಜಾಗತಿಕ ಮಹಾಯುದ್ಧದ ಇತಿಹಾಸದಲ್ಲಿ ಓರ್ವ ಅಜ್ಞಾತನಾದ ರಹಸ್ಯ ಏಜೆಂಟ್. ಒಂದೆಡೆ ಜರ್ಮನರಿಗೆ, ಇನ್ನೊಂದೆಡೆ ಬ್ರಿಟಿಷರ ಏಜೆಂಟನಂತೆ ವರ್ತಿಸಿದ್ದ ಈ ಚಾಣಾಕ್ಷ ಬೇಹುಗಾರನ ರೋಚಕ ಕಥೆ ಇಲ್ಲಿದೆ.
1941ರ ಫೆಬ್ರವರಿ 22ರ ಮಧ್ಯಾಹ್ನದ ಹೊತ್ತು. ಅಷ್ಟೇನೂ ಸ್ಪುರದ್ರೂಪಿಯಲ್ಲದ, ಕುಳ್ಳಗಿನ ಹಾಗೂ ಗಡ್ಡ,ಮೀಸೆ ಬೋಳಿಸಿ ಕೊಂಡಿದ್ದ ವ್ಯಕ್ತಿಯೊಬ್ಬ ಕಾಬೂಲ್‌ನ ಬೀದಿಗಳಲ್ಲಿ ನಡೆದು ಬಂದು, ಇಟಲಿ ರಾಯಭಾರಿ ಕಚೇರಿಯ ಹಿಂಬಾಗಿಲನ್ನು ಬಡಿಯತೊಡಗಿದ. ಆಗ ಅಫ್ಘಾನಿಸ್ತಾನವು ತಟಸ್ಥ ರಾಷ್ಟ್ರವಾಗಿಯೇ ಉಳಿದಿತ್ತು. ಎರಡನೆ ವಿಶ್ವ ಮಹಾಯುದ್ಧ ಆರಂಭಗೊಂಡು 17 ತಿಂಗಳುಗಳೇ ಕಳೆದಿದ್ದರೂ,ಯುದ್ಧದ ಕಾವು ಇನ್ನೂ ಆ ದೇಶದ ಗಡಿಯನ್ನು ತಲುಪಿರಲಿಲ್ಲ. ಬ್ರಿಟನ್‌ನ ಪ್ರಬಲ ಪ್ರತಿರೋಧವನ್ನು ಹೊರತುಪಡಿಸಿದರೆ, ಆ ಹೊತ್ತಿಗಾಗಲೇ ಯುರೋಪ್‌ನಲ್ಲಿ ನಾಝಿಗಳು ಪಾರಮ್ಯ ಸ್ಥಾಪಿಸಿದ್ದರು.
ಇಟಲಿ ರಾಯಭಾರಿ ಕಚೇರಿಯ ಹಿಂಬಾಗಿಲಿನ ಕದ ತಟ್ಟಿದ ವ್ಯಕ್ತಿಯನ್ನು ಕಾಣಲು ರಾಯಭಾರಿ ಕಚೇರಿಯ ಉದ್ಯೋಗಿಗಳು ಜಮಾಯಿಸಿದ್ದರು. ಆತ ಮೇಲ್ನೋಟಕ್ಕೆ ಸ್ಥಳೀಯನಂತೆ ಕಾಣುತ್ತಿದ್ದ. ಇಟಲಿಯ ರಾಯಭಾರಿಯನ್ನು ಭೇಟಿ ಮಾಡುವುದೇ ಆತನ ಮುಖ್ಯ ಉದ್ದೇಶವಾಗಿತ್ತು.
ಆದರೆ ಈ ಭೇಟಿಗೆ ಕಾವಲುಗಾರರು ಅವಕಾಶ ನೀಡುವುದಿಲ್ಲವೆಂದು. ಅರಿತಿದ್ದ ಆತ ತಾನೋರ್ವ ಬಾಣಸಿಗನೆಂದು, ರಾಯಭಾರಿಗಾಗಿ ಕೆಲಸ ಮಾಡಲು ಕಳುಹಿಸಲ್ಪಟ್ಟವನೆಂದು ಪರಿಚಯಿಸಿಕೊಂಡಿದ್ದ. ಆಗ ಕಾವಲುಗಾರರು ರಾಯಭಾರಿ ಕುಳಿತಿದ್ದ ಎತ್ತರದ ಮೇಲ್ಛಾವಣಿಯ ಕೊಠಡಿಯೆಡೆಗೆ ಕೊಂಡೊಯ್ದರು.
ತನ್ನ ಅಫ್ಘಾನ್ ಉದ್ಯೋಗಿಗಳಲ್ಲೊಬ್ಬನ ಜೊತೆ ಗಂಭೀರವಾದ ಮಾತುಕತೆಯಲ್ಲಿ ನಿರತರಾಗಿದ್ದ ರಾಯಭಾರಿಗೆ ಈ ಆಗಂತುಕನ ಆಗಮನದಿಂದ ತುಸು ಇರಿಸುಮುರಿಸಾಯಿತು. ಸಿಮೆನ್ಸ್ ಸಂಸ್ಥೆಯ ಕಾಬೂಲ್ ಕಚೇರಿಯನ್ನು ನಡೆಸುತ್ತಿರುವ ಜರ್ಮನ್ ಹೆರ್ರ್ ಥಾಮಸ್, ತನ್ನನ್ನು ಕಳುಹಿಸಿರುವುದಾಗಿ ಆತ ಉತ್ತರಿಸಿದ. ಆಗ ಸಹನೆಕಳೆದುಕೊಂಡ ಇಟಲಿ ರಾಯಭಾರಿ ‘‘ಯಾಕಾಗಿ’’ ಎಂದು ಜೋರಾಗಿ ಪ್ರಶ್ನಿಸಿದ. ಆದರೆ ಬಂದಾತ, ನಿರ್ಲಿಪ್ತನಾಗಿ ‘‘ನನಗೆ ತಿಳಿದಿಲ್ಲ, ನಿಮ್ಮನ್ನು ಕೇವಲ ಭೇಟಿಯಾಗುವಂತೆ ಅಷ್ಟೇ ಹೇಳಿದ್ದಾರೆ’’ ಎಂದು ದೃಢವಾದ ಧ್ವನಿಯಲ್ಲಿ ಹೇಳಿದ.
ಈ ಮನುಷ್ಯನ ಧ್ವನಿಯಲ್ಲಿ ಯಾವುದೋ ಗೂಢಾರ್ಥ ವಿರುವುದನ್ನು ಗ್ರಹಿಸಿದ ಇಟಲಿ ರಾಯಭಾರಿ ಖರೋನಿ, ಈತ ಸಾಮಾನ್ಯ ಅಫ್ಘಾನ್ ಅಲ್ಲವೆಂಬುದನ್ನು ಅರಿತುಕೊಂಡ. ಆತ ಕುಳ್ಳನಾದರೂ, ದೃಢಕಾಯನಾಗಿದ್ದ. ರಾಯಭಾರಿ ಕೂಡಲೇ ಫೋನ್ ಎತ್ತಿ, ಥಾಮಸ್‌ಗೆ ಕರೆ ಮಾಡಿದ. ಕೆಲವು ನಿಮಿಷಗಳವರೆಗೆ ಇಬ್ಬರೂ ಜರ್ಮನ್ ಭಾಷೆಯಲ್ಲಿ ದೂರವಾಣಿಯಲ್ಲಿ ಮಾತನಾಡಿದರು. ಅವರ ಸಂಭಾಷಣೆಯನ್ನು ಆಗುಂತಕ ಗಮನವಿಟ್ಟು ಕೇಳುತ್ತಿದ್ದ. ಇಟಲಿಯ ರಾಯಭಾರಿ ಅರೆ ಜರ್ಮನ್ ಆಗಿದ್ದರಿಂದ ಆತನಿಗೆ ಜರ್ಮನ್ ಭಾಷೆ ಚೆನ್ನಾಗಿ ಬರುತ್ತಿತ್ತು.
ಕೆಲವು ನಿಮಿಷಗಳ ಬಳಿಕ ಮಾತುಕತೆ ಮುಕ್ತಾಯಗೊಳಿಸಿದ ಬಳಿಕ ರಾಯಭಾರಿ, ಸಂದರ್ಶಕನಿಗೆ ಕುಳಿತುಕೊಳ್ಳುವಂತೆ ಹೇಳಿದರು. ಮೆಲ್ಲಗೆ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುತ್ತಾ, ಸೌಜನ್ಯಪೂರ್ವಕವಾಗಿ ತನ್ನನ್ನು ಪರಿಚಯಿಸಿದರು.
ಆನಂತರ ಬಂದಿದ್ದಾತ ತನ್ನ ಹೆಸರು ರಹ್ಮತ್ ಖಾನ್ ಎಂದು ಹೇಳಿದ. ವಾಸ್ತವವಾಗಿ ಅದು ಆತನ ನಿಜನಾಮಧೇಯವಾಗಿರಲಿಲ್ಲ. ತಾನು ಅಫ್ಘಾನ್ ಪ್ರಜೆಯಲ್ಲ,ಆದರೆ ಭಾರತೀಯನೆಂದು ಆತ ಹೇಳಿದ. ತಾನು ಜನವರಿ 27ರಂದು ಭಾರತದಿಂದ ಅಫ್ಘಾನಿಸ್ತಾನಕ್ಕೆ ಆಗಮಿಸಿದ್ದಾಗಿ ಆತ ಹೇಳಿದ. ಬ್ರಿಟಿಷ್ ಭಾರತದಿಂದ ಅಫ್ಘಾನಿಸ್ತಾನವನ್ನು ಪ್ರತ್ಯೇಕಿಸುವ ಬುಡಕಟ್ಟು ಪ್ರದೇಶವಾದ ಪೇಶಾವರದಿಂದ ಕಾಲ್ನಡಿಗೆಯಲ್ಲಿಯೇ 200 ಕಿ.ಮೀ. ಕ್ರಮಿಸಿ ಕಾಬೂಲ್‌ಗೆ ಬಂದಿರುವುದಾಗಿ ತಿಳಿಸಿದ. ಭಾರತದ ಜನಪ್ರಿಯ ಸ್ವಾತಂತ್ರ ಸೇನಾನಿ ಸುಭಾಶ್ಚಂದ್ರ ಬೋಸ್‌ರ ಮಾರ್ಗದರ್ಶಿ ಹಾಗೂ ಬೆಂಗಾವಲಿಗನಾಗಿ ತಾನು ಇಲ್ಲಿಗೆ ಬಂದಿದ್ದಾಗಿ ಹೇಳಿದ. ಭಾರತದಿಂದ ಪರಾರಿಯಾಗಿದ್ದ ಸುಭಾಶ್ಚಂದ್ರ ಬೋಸ್ ಬರ್ಲಿನ್‌ಗೆ ಹೋಗಬಯಸುತ್ತಿದ್ದರು. ಅಲ್ಲಿ ಜರ್ಮನರ ನೆರವು ಪಡೆದು ಭಾರತವನ್ನು ಬ್ರಿಟಿಷರ ದಾಸ್ಯದಿಂದ ವಿಮೋಚನೆಗೊಳಿಸಲು ಅವರು ಬಯಸಿದ್ದರು.
ರಹ್ಮತ್ ಖಾನ್ ಹಾಗೂ ಸುಭಾಶ್ಚಂದ್ರ ಬೋಸ್ ಕಾಬೂಲ್‌ನಲ್ಲಿರುವ ಜರ್ಮನ್ ರಾಯಭಾರಿ ಕಚೇರಿಯ ಜೊತೆ ಸಂಪರ್ಕವೇರ್ಪಡಿಸಿಕೊಂಡಿದ್ದರು. ಹಲವಾರು ಮಾತುಕತೆಗಳ ಆನಂತರವೂ, ಬೋಸ್ ಅವರನ್ನು ಕಾಬೂಲ್‌ನಿಂದ ಹೊರಗೆ ಕಳುಹಿಸಲು ಯಾವುದೇ ಸೂಕ್ತವಾದ ಯಾವುದೇ ಏರ್ಪಾಡು ನಡೆದಿರಲಿಲ್ಲ. ತಾವು ಕಾಬೂಲ್‌ನಲ್ಲಿ ಇದ್ದಷ್ಟು ದಿನ ತಾವು ಅಪಾಯದಲ್ಲಿ ಸಿಲುಕುವ ಸಾಧ್ಯತೆ ಇನ್ನೂ ಹೆಚ್ಚೆಂಬುದು ಇಬ್ಬರಿಗೂ ತಿಳಿದಿತ್ತು. ಬೋಸ್ ಹಾಗೂ ಖಾನ್ ಅಕ್ರಮವಾಗಿ ಅಫ್ಘಾನಿಸ್ತಾನವನ್ನು ಪ್ರವೇಶಿಸಿದ್ದರು. ಅವರ ಬಳಿ ಪಾಸ್‌ಪೋರ್ಟ್ ಅಥವಾ ಇನಾವುದೇ ದಾಖಲೆಪತ್ರಗಳು ಇರಲಿಲ್ಲ. ಅಫ್ಘಾನಿಸ್ತಾನದ ಪೊಲೀಸರಿಗೆ ಲಂಚ ನೀಡುವ ಮೂಲಕ ಅವರು ಬಂಧನಕ್ಕೊಳಗಾಗುವುದರಿಂದ ತಪ್ಪಿಸಿಕೊಂಡಿದ್ದರು.
ಒಂದು ವೇಳೆ ಇವರಿಬ್ಬರು ಅಫ್ಘಾನಿಸ್ತಾನಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರೆ, ಅವರು ತಕ್ಷಣವೇ ಬ್ರಿಟಿಷರಿಗೆ ಹಸ್ತಾಂತರಿಸಲ್ಪಡುತ್ತಿದ್ದರು. ಹೀಗಾಗಿ ಅಫ್ಘಾನ್ ಗಡಿಯನ್ನು ದಾಟುವ ಕೊನೆಯ ಪ್ರಯತ್ನವಾಗಿ ಖಾನ್, ರಾಯಭಾರಿ ಖರೋನಿಯನ್ನು ಭೇಟಿ ಮಾಡುವ ದಾಳ ಉರುಳಿಸಿದ್ದ. ಅಫ್ಘಾನ್-ರಶ್ಯ ಗಡಿಯನ್ನು ದಾಟಿ, ಸೋವಿಯತ್‌ಯೂನಿಯನ್ ಮಾರ್ಗವಾಗಿ ಹಿಟ್ಲರ್ ಜರ್ಮನಿಯ ದಾರಿ ಹಿಡಿಯುವುದೇ ಅವರ ಗುರಿಯಾಗಿತ್ತು.
ಮುಂದಿನ ಮೂರು ವಾರಗಳವರೆಗೆ ಹಲವು ಬಾರಿ ಮಾತುಕತೆ ನಡೆದ ಬಳಿಕ ಖರೋನಿ, ಬೋಸ್ ಅವರಿಗೆ ಇಟಲಿಯ ರಾಜತಾಂತ್ರಿಕ ಪಾಸ್ ನೀಡಿ, ಭದ್ರತಾ ಬೆಂಗಾವಲಿನೊಂದಿಗೆ ಅಫ್ಘಾನ್ ಗಡಿ ದಾಟುವಲ್ಲಿ ನೆರವಾದರು. ಅಲ್ಲಿಂದ ಬೋಸ್ ಸ್ಲೀಪರ್ ರೈಲಿನಲ್ಲಿ ಬರ್ಲಿನ್‌ಗೆ ಪ್ರಯಾಣಿಸಿದರು. ಇತ್ತ ಖಾನ್ ಕಾಬೂಲ್‌ನಲ್ಲಿಯೇ ಉಳಿದುಕೊಂಡ.

ಬರ್ಲಿನ್‌ನಲ್ಲಿ ಹಿಟ್ಲರ್‌ನನ್ನು ಭೇಟಿಯಾದ ಬೋಸ್, ತರುವಾಯ ಜಪಾನಿಗೆ ತೆರಳಿದರು. ಬ್ರಿಟಿಶರ ವಿರುದ್ಧ ಹೋರಾಡಲು ಸುಸಜ್ಜಿತವಾದ ಸೇನೆಯನ್ನು ಕಟ್ಟುವುದೇ ಅವರ ಉದ್ದೇಶವಾಗಿತ್ತು. ಆದರೆ ಎರಡನೆ ಮಹಾಯುದ್ಧದ ವೇಳೆ ಜಪಾನ್ ಮೈತ್ರಿಕೂಟದ ಸೇನೆಗೆ ಶರಣಾದ ಕೆಲವು ದಿನಗಳ ಬಳಿಕ ನಡೆದ ವಿಮಾನ ಅವಘಡದಲ್ಲಿ ಬೋಸ್ ಸಾವನ್ನಪ್ಪಿದರು. ಆದಾಗ್ಯೂ ಬೋಸ್ ಅವರ ಸಾವು, ಇಂದಿಗೂ ನಿಗೂಢವಾಗಿಯೇ ಉಳಿದಿದೆ.
ಆದರೆ ಕಾಬೂಲ್‌ನಲ್ಲಿ ಉಳಿದುಕೊಂಡಿದ್ದ ರಹ್ಮತ್‌ಖಾನ್‌ನ ಆನಂತರದ ಕಥೆ ರೋಚಕವಾಗಿದೆ. ಬೋಸ್ ಯುರೋಪ್‌ಗೆ ನಿರ್ಗಮಿಸಿದ ಕೆಲವೇ ದಿನಗಳೊಳಗೆ ಖಾನ್, ಇಟಲಿಯನ್ನರ ಗೂಢಚಾರನಾಗಿ ಮಾರ್ಪಾಡುಗೊಂಡಿದ್ದ.
ಎರಡನೆ ಮಹಾಯುದ್ಧ ಆರಂಭಗೊಂಡಾಗಿನಿಂದ ಖರೋನಿ, ಭಾರತದಲ್ಲಿ ಬ್ರಿಟಿಷರಿಗೆ ಬಲವಾದ ಪ್ರಹಾರ ನೀಡಬಲ್ಲ ಅಸ್ತ್ರವೊಂದನ್ನು ಹುಡುಕುತ್ತಿದ್ದರು. ಭಾರತದಲ್ಲಿ ಬ್ರಿಟಿಷರಿಗೆ ಬಲವಾದ ಹೊಡೆತ ನೀಡಿದಲ್ಲಿ, ಬ್ರಿಟಿಷ್ ಸಾಮ್ರಾಜ್ಯದ ಮೇಲೆ ಗಂಭೀರವಾದ ಪರಿಣಾಮ ಬೀರಲಿದೆಯೆಂಬುದನ್ನು ಆತ ಅರಿತಿದ್ದ.

ಇಟಲಿಯನ್ನರ ಜೊತೆ ಕೆಲಸ ಮಾಡಲು ತನ್ನ ಏಜೆಂಟಾಗಿ ಖಾನ್‌ನನ್ನು ಬೋಸ್ ನೇಮಿಸಿದ್ದನ್ನು, ಖರೋನಿ ಸದವಕಾಶವಾಗಿ ಬಳಸಿಕೊಂಡ. ಕೆಲವು ತಿಂಗಳುಗಳ ಬಳಿಕ ಖಾನ್, ಇಟಲಿಯ ಬೇಹುಗಾರನಾದ. ಆತ ಇಟಲಿ ಹಾಗೂ ಜರ್ಮನರಿಬ್ಬರಿಂದಲೂ ಹಣ ಪಡೆದುಕೊಳ್ಳುತ್ತಿದ್ದ. ಆತ ಫ್ಯಾಶಿಸ್ಟ್ ಆಗಿರಲಿಲ್ಲ. ಬದಲಿಗೆ ಕಮ್ಯೂನಿಸ್ಟನಾಗಿದ್ದ. ಖಾನ್ ಆರಂಭದಿಂದಲೇ ಈ ಎರಡೂ ದೇಶಗಳಿಗೂ ಚಳ್ಳೆಹಣ್ಣು ತಿನ್ನಿಸುತ್ತಿದ್ದ.
ಒಮ್ಮೆ ಹಿಟ್ಲರ್, ಸೋವಿಯತ್ ಮೇಲೆ ಆಕ್ರಮಣ ನಡೆಸಲು ಆಪರೇಶನ್ ಬರ್ಬೊಸಾ ಕಾರ್ಯಾಚರಣೆ ಆರಂಭಿಸಿದ್ದ. ಖಾನ್ ರಹಸ್ಯವಾಗಿ ರಶ್ಯನ್ನರ ಜೊತೆ ಕೈಜೋಡಿಸಿದ್ದ ಹಾಗೂ ನಾಝಿಗಳನ್ನು ಮೂರ್ಖರನ್ನಾಗಿಸಿದ್ದ. ತದನಂತರ ಆತ ಬ್ರಿಟಿಷರ ಪರವಾಗಿ ಕೆಲಸ ಮಾಡಿದ್ದ. ಅಲ್ಲಿ ಆತನಿಗೆ ಸಿಲ್ವರ್ ಎಂದು ಹೆಸರು ನೀಡಿದ್ದರು.
ಇತ್ತ ಜರ್ಮನರೂ ಆತನನ್ನು ಅತಿಯಾಗಿ ನಂಬಿದ್ದರು. ಖಾನ್‌ಗೆ ಜರ್ಮನಿಯ ಅತ್ಯುನ್ನತ ಮಿಲಿಟರಿ ಪದಕವಾ ಐರನ್ ಕ್ರಾಸ್ ನೀಡಿ ಗೌರವಿಸಿದ್ದರು.ಬರ್ಲಿನ್‌ನಲ್ಲಿರುವ ಹಿಟ್ಲರ್‌ನ ರಹಸ್ಯದಳ ಅಬ್‌ವೆರ್‌ನಲ್ಲಿರುವ ಮುಖ್ಯ ಕಾರ್ಯಾಲಯಕ್ಕೆ ನೇರವಾಗಿ ರಹಸ್ಯ ಸಂದೇಶಗಳನ್ನು ಪ್ರಸಾರ ಮಾಡಲು ಆತನಿಗೆ ್ರಾನ್ಸ್ ಮೀಟರೊಂದನ್ನು ನೀಡಿದ್ದರು.
ಬ್ರಿಟಿಷರ ರಹಸ್ಯ ಮಿಲಿಟರಿ ಮಾಹಿತಿಗಳನ್ನ್ನು ತಲುಪಿಸುವುದಾಗಿ ಹೇಳಿ ಖಾನ್ ನಾಜಿ ಮೈತ್ರಿಕೂಟದಿಂದ ಬರೋಬ್ಬರಿ 2.5 ದಶಲಕ್ಷ ಪೌಂಡ್‌ಗಳಷ್ಟು ಹಣವನ್ನು ಪೀಕಿಸಿದ್ದ. ಆದರೆ ಈ ಮಿಲಿಟರಿ ಮಾಹಿತಿಗಳು ಕಪೋಲಕಲ್ಪಿತವಾಗಿದ್ದು, ಅವನ್ನು ದಿಲ್ಲಿಯ ವೈಸ್‌ರಾಯ್ ಭವನದ ಉದ್ಯಾನವನದಲ್ಲಿ ಬ್ರಿಟಿಷರಿಂದಲೇ ತಯಾರಿಸಲಾಗಿತ್ತೆಂಬ ಬಗ್ಗೆ ಲವಲೇಶ ಸಂದೇಹವೂ ನಾಝಿಗಳಿಗೆ ಬಂದಿರಲಿಲ್ಲ. ಎರಡನೆ ಮಹಾಯುದ್ಧ ಮುಗಿಯುವ ವೇಳೆಗೆ ಆತ ಜಪಾನಿಯರಿಗೂ ಪಂಗನಾಮ ಹಾಕಿದ್ದ.







