ಇಂಧನ ಇಲಾಖೆ ಅವ್ಯವಹಾರ: ಪೂರಕ ಮಾಹಿತಿ ಕೋರಿ ಸ್ಪೀಕರ್, ಸಿಎಂಗೆ ಕುಮಾರಸ್ವಾಮಿ ಪತ್ರ

ಬೆಂಗಳೂರು, ಎ. 7: ವಿದ್ಯುತ್ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಸಂಬಂಧ ರಚಿಸಿರುವ ಸದನ ಸಮಿತಿ ಸದಸ್ಯರಿಗೆ ದೃಢೀಕರಿಸಿದ ಪೂರಕ ದಾಖಲೆಗಳನ್ನು ಒದಗಿಸಬೇಕು ಎಂದು ಸ್ಪೀಕರ್ ಕೆ.ಬಿ.ಕೋಳಿವಾಡ, ಸಿಎಂ ಸಿದ್ದರಾಮಯ್ಯನವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪತ್ರ ಬರೆದಿದ್ದಾರೆ.
2004ರಿಂದ 2014ರ ಅವಧಿಯಲ್ಲಿ ಇಂಧನ ಇಲಾಖೆಯಲ್ಲಿ ನಡೆದಿರುವ ವಿದ್ಯುತ್ ಉತ್ಪಾದನೆ, ಬಳಕೆ, ಖರೀದಿ ಒಪ್ಪಂದ ಸೇರಿದಂತೆ ಈ ಸಂಬಂಧದ ಎಲ್ಲ ಮಾಹಿತಿಯನ್ನು ಸದನ ಸಮಿತಿಯ ಎಲ್ಲ ಸದಸ್ಯರಿಗೆ ನೀಡಬೇಕು ಎಂದು ಕುಮಾರಸ್ವಾಮಿ ಪತ್ರ ಮುಖೇನ ಆಗ್ರಹಿಸಿದ್ದಾರೆ.
ವಿದ್ಯುತ್ ಖರೀದಿಗೆ ಸಂಬಂಧಪಟ್ಟಂತೆ ಎಲ್ಲ ಕಡತಗಳನ್ನು ಪರಿಶೀಲಿಸಿ ಸ್ಪಷ್ಟವಾದ, ದೃಢೀಕರಿಸಿದ ಮಾಹಿತಿ ಸಮಿತಿ ಮುಂದೆ ಮಂಡಿಸಿದ ಬಳಿಕ ತಮ್ಮ ಅಭಿಪ್ರಾಯವನ್ನು ಮಂಡಿಸಲು ಸಾಧ್ಯ. ಸದನ ಸಮಿತಿ ಅಧ್ಯಕ್ಷರಾಗಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಂದ ನಿಷ್ಪಕ್ಷಪಾತ ಮತ್ತು ವಸ್ತುನಿಷ್ಠ ವರದಿ ನಿರೀಕ್ಷಿಸುವುದು ಕಷ್ಟ ಸಾಧ್ಯ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಸಮಿತಿ ವರದಿಯ ಕರಡು ಸಿದ್ಧವಾಗಿ ಒಂದು ವರ್ಷ ಕಳೆದರೂ ಮಂಡಿಸಿಲ್ಲ. 2008ರಿಂದ ಈವರೆಗೂ ವಿದ್ಯುತ್ ಖರೀದಿ ಸೇರಿದಂತೆ ಇಲಾಖೆಯಲ್ಲಿ ಸುಮಾರು 17 ಸಾವಿರ ಕೋಟಿ ರೂ.ಗಳು ರಾಜ್ಯ ಸರಕಾರದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ಕುಮಾರಸ್ವಾಮಿ ಉಲ್ಲೇಖಿಸಿದ್ದಾರೆ.







