ಜನಾಂಗೀಯ ನಿಂದನೆ ಹೇಳಿಕೆ: ಬಿಜೆಪಿ ಮುಖಂಡ ತರುಣ್ ವಿಜಯ್ ಬಂಧನಕ್ಕೆ ಆಗ್ರಹ

ಬೆಂಗಳೂರು, ಎ. 8: ದಕ್ಷಿಣ ಭಾರತೀಯರ ಬಗ್ಗೆ ಜನಾಂಗೀಯ ನಿಂದನೆ ಹೇಳಿಕೆ ನೀಡಿದ ಬಿಜೆಪಿ ಮುಖಂಡ ತರುಣ್ ವಿಜಯ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಕೂಡಲೇ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಧರಣಿ ನಡೆಸಿದರು.
ಶನಿವಾರ ಇಲ್ಲಿನ ಆನಂದ್ ರಾವ್ ವೃತ್ತದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದ ಕಾರ್ಯಕರ್ತರು, ದೇಶದ ಭಾವೈಕ್ಯತೆ, ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಕೆಲಸವನ್ನು ಬಿಜೆಪಿ ಮುಖಂಡ ತರುಣ್ ವಿಜಯ್ ಮಾಡುತ್ತಿದ್ದಾರೆಂದು ಆರೋಪಿಸಿದರು.
ಗ್ರೇಟರ್ ನೊಯ್ಡದಲ್ಲಿ ಆಫ್ರಿಕನ್ ವಿದ್ಯಾರ್ಥಿಗಳ ಮೇಲಿನ ಜನಾಂಗೀಯ ದ್ವೇಷದ ದಾಳಿ ಕುರಿತು ಅಲ್ ಜಝಿರಾ ಸುದ್ದಿ ವಾಹಿನಿಯ ಆನ್‌ಲೈನ್ ಶೋ ಕಾರ್ಯಕ್ರಮದಲ್ಲಿ ತರುಣ್ ವಿಜಯ್ ದಕ್ಷಿಣ ಭಾರತೀಯರ ಕಪ್ಪು ಬಣ್ಣ ಎಂದು ಹೀಯಾಳಿಸಿದ್ದರು.
ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇಂತಹ ಜನಾಂಗೀಯ ದ್ವೇಷದ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೆ, ಕೋಮುವಾದ, ಮತೀಯವಾದ ಹುಟ್ಟುಹಾಕುವುದೇ ಬಿಜೆಪಿ ಧ್ಯೇಯವಾಗಿದೆ ಎಂದು ಕಾಂಗ್ರೆಸ್ ಮುಖಂಡರು ದೂರಿದರು.
Next Story





