ಕೇರಳ ಕ್ರಿಕೆಟ್ ತಂಡಕ್ಕೆ ವಾಟ್ಮೋರ್ ಕೋಚಿಂಗ್

ಕೊಚ್ಚಿ, ಎ.8: ಶ್ರೀಲಂಕಾ ತಂಡ 1996ರಲ್ಲಿ ಚೊಚ್ಚಲ ವಿಶ್ವಕಪ್ ಜಯಿಸಲು ಮಾರ್ಗದರ್ಶನ ನೀಡಿದ್ದ, ಬಾಂಗ್ಲಾದೇಶ ತಂಡ ಮೊತ್ತ ಮೊದಲ ಬಾರಿ ಟೆಸ್ಟ್ ಪಂದ್ಯ ಗೆಲ್ಲಲು ಕೋಚಿಂಗ್ ನೀಡಿರುವ ಆಸ್ಟ್ರೇಲಿಯದ ಡೇವ್ ವಾಟ್ಮೋರ್ ಇನ್ನು ಮುಂದೆ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಗಳಿಗೆ ಕೋಚಿಂಗ್ ನೀಡುವುದಿಲ್ಲ.
ಕ್ರಿಕೆಟ್ ಬೆಳವಣಿಗೆಯ ಅಂಶದತ್ತ ಗಮನ ನೀಡಲು ನಿರ್ಧರಿಸಿರುವ ವಾಟ್ಮೋರ್ ಕೇರಳ ಕ್ರಿಕೆಟ್ ತಂಡದೊಂದಿಗೆ ಮುಂಬರುವ ದೇಶೀಯ ಋತುವಿನಲ್ಲಿ ಆರು ತಿಂಗಳ ಕಾಲ ಕೋಚಿಂಗ್ ನೀಡಲು ಒಪ್ಪಿಕೊಂಡಿದ್ದಾರೆ. ಚೆನ್ನೈ ಮೂಲದ ಶ್ರೀರಾಮಚಂದ್ರ ವಿವಿಯೊಂದಿಗೆ 3 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿರುವ ವಾಟ್ಮೋರ್ ಚೆನ್ನೈನಲ್ಲಿರುವ ವಾಟ್ಮೋರ್ ಕ್ರಿಕೆಟ್ ಕೇಂದ್ರದಲ್ಲಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
‘‘ನಾನು 23 ವರ್ಷಗಳ ಕಾಲ ವಿಶ್ವದ ವಿವಿಧ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಗಳಿಗೆ ಕೋಚಿಂಗ್ ನೀಡಿದ್ದೇನೆ. ಇದೀಗ ಒಂದು ಅಧ್ಯಾಯವನ್ನು ಕೊನೆಗೊಳಿಸುವ ಸಮಯ ಬಂದಿದೆ. ಕ್ರಿಕೆಟ್‌ನ ಬೆಳವಣಿಗೆಯತ್ತ ಗಮನ ನೀಡಲು ನಿರ್ಧರಿಸಿದ್ದೇನೆ. ನನ್ನ ಕೋಚಿಂಗ್‌ನಲ್ಲಿ ಕೇರಳ ಕ್ರಿಕೆಟ್‌ನಲ್ಲಿ ಸಕಾರಾತ್ಮಕ ಪರಿಣಾಮ ಬೀರುವ ವಿಶ್ವಾಸದಲ್ಲಿದ್ದೇನೆ. ನನ್ನ ಅನುಭವ ಆಟಗಾರರಿಗೆ ನೆರವಾಗುವ ನಿರೀಕ್ಷೆಯಲ್ಲಿರುವೆ’’ ಎಂದು 63ರ ಹರೆಯದ ವಾಟ್ಮೋರ್ ಹೇಳಿದ್ದಾರೆ.





