ಡೇವಿಸ್‌ಕಪ್: ವಿಶ್ವ ಗ್ರೂಪ್ ಪ್ಲೇ-ಆಫ್‌ಗೆ ಭಾರತ ತೇರ್ಗಡೆ

ಬೆಂಗಳೂರು, ಎ.8: ಡೇವಿಸ್‌ಕಪ್ ಏಷ್ಯಾ/ಒಶಿಯಾನಿಯ ಗ್ರೂಪ್-1ರ ಎರಡನೆ ಸುತ್ತಿನ ಪಂದ್ಯದಲ್ಲಿ ಉಜ್ಬೇಕಿಸ್ತಾನ ವಿರುದ್ಧದ ಡಬಲ್ಸ್ ಪಂದ್ಯವನ್ನು ಗೆದ್ದುಕೊಂಡಿರುವ ಭಾರತ 3-0 ಮುನ್ನಡೆ ಸಾಧಿಸಿದೆ. ಈ ಮೂಲಕ ವಿಶ್ವ ಗ್ರೂಪ್ ಪ್ಲೇ-ಆಫ್‌ಗೆ ತೇರ್ಗಡೆಯಾಗಿದೆ.
ಇಲ್ಲಿನ ಕೆಎಸ್‌ಎಲ್‌ಟಿಎ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪುರುಷರ ಡಬಲ್ಸ್ ಪಂದ್ಯದಲ್ಲಿ ರೋಹನ್ ಬೋಪಣ್ಣ ಹಾಗೂ ಚೊಚ್ಚಲ ಪಂದ್ಯ ಆಡಿದ ಎನ್.ಶ್ರೀರಾಮ್ ಬಾಲಾಜಿ ಅವರು ಉಜ್ಬೇಕಿಸ್ತಾನದ ಫಾರೂಕ್ ಡಸ್ಟೊವ್ ಹಾಗೂ ಸಂಜರ್ ಫೇಝಿವ್‌ರನ್ನು 6-2, 6-4, 6-1 ಸೆಟ್‌ಗಳ ಅಂತರದಿಂದ ಮಣಿಸಿದರು.
ಶುಕ್ರವಾರ ನಡೆದ ಸಿಂಗಲ್ಸ್ ಪಂದ್ಯಗಳಲ್ಲಿ ಜಯ ಸಾಧಿಸಿದ್ದ ರಾಮ್‌ಕುಮಾರ್ ರಾಮನಾಥನ್ ಹಾಗೂ ಪ್ರಜ್ಞೇಶ್ ಗುಣೇಶ್ವರನ್ ಭಾರತಕ್ಕೆ 2-0 ಮುನ್ನಡೆ ಒದಗಿಸಿಕೊಟ್ಟಿದ್ದರು. 3-0 ಅಂತರದಿಂದ ಡೇವಿಸ್‌ಕಪ್‌ನ ಎರಡನೆ ಸುತ್ತಿನ ಪಂದ್ಯವನ್ನು ಗೆದ್ದುಕೊಂಡಿರುವ ಭಾರತ ಸೆಪ್ಟಂಬರ್‌ನಲ್ಲಿ ನಡೆಯಲಿರುವ ವಿಶ್ವ ಗ್ರೂಪ್ ಪ್ಲೇ-ಆಫ್ ಟೂರ್ನಿಗೆ ತೇರ್ಗಡೆಯಾಗಿದೆ. ಪ್ಲೇ-ಆಫ್‌ನಲ್ಲಿ ಭಾರತದ ಎದುರಾಳಿ ತಂಡ ಯಾವುದೆಂದು ಇನ್ನೂ ನಿರ್ಧಾರವಾಗಿಲ್ಲ





