ಗುಜರಾತ್ ಲಯನ್ಸ್‌ಗೆ ಹೈದರಾಬಾದ್ ವಿರುದ್ಧ ಕಠಿಣ ಸವಾಲು
ಹೈದರಾಬಾದ್, ಎ.8: ಎರಡು ಬಾರಿ ಐಪಿಎಲ್ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ತನ್ನ ಮೊದಲ ಐಪಿಎಲ್ ಪಂದ್ಯದಲ್ಲಿ 10 ವಿಕೆಟ್‌ಗಳ ಅಂತರದಿಂದ ಹೀನಾಯವಾಗಿ ಸೋತಿರುವ ಗುಜರಾತ್ ಲಯನ್ಸ್ ತಂಡ ರವಿವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಕಠಿಣ ಸವಾಲು ಎದುರಿಸಲಿದೆ.
ರಾಜ್‌ಕೋಟ್‌ನಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡದ ಆರಂಭಿಕ ಆಟಗಾರರಾದ ಕ್ರಿಸ್ ಲಿನ್ ಹಾಗೂ ಗೌತಮ್ ಗಂಭೀರ್ ಮೊದಲ ವಿಕೆಟ್‌ಗೆ 184 ರನ್ ಜೊತೆಯಾಟ ನಡೆಸಿ ಲಯನ್ಸ್ ತಂಡದ ಬೌಲಿಂಗ್ ದಾಳಿಯನ್ನು ಧೂಳೀಪಟಗೈದಿದ್ದರು.
ಮತ್ತೊಂದೆಡೆ, ಆತಿಥೇಯ ಹೈದರಾಬಾದ್ ತಂಡ ಬುಧವಾರ ನಡೆದಿದ್ದ ಬೆಂಗಳೂರು ತಂಡದ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ 35 ರನ್‌ಗಳಿಂದ ಜಯ ಸಾಧಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಹಿರಿಯ ಬ್ಯಾಟ್ಸ್‌ಮನ್ ಶಿಖರ್ ಧವನ್, ಆಲ್‌ರೌಂಡರ್‌ಗಳಾದ ಯುವರಾಜ್ ಸಿಂಗ್ ಹಾಗೂ ಮೊಸಿಸ್ ಹೆನ್ರಿಕ್ಸ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ರವಿವಾರದ ಪಂದ್ಯದಲ್ಲಿ ಡೇವಿಡ್ ವಾರ್ನರ್ ನೇತೃತ್ವದ ಹೈದರಾಬಾದ್ ತಂಡ ಪಂದ್ಯ ಗೆಲ್ಲುವ ಫೇವರಿಟ್ ತಂಡವಾಗಿದೆ.
ಬೆಂಗಳೂರು ವಿರುದ್ಧ ಪಂದ್ಯದಲ್ಲಿ ಯುವರಾಜ್ ಸಿಂಗ್ 27 ಎಸೆತಗಳಲ್ಲಿ 62 ರನ್ ಗಳಿಸಿದ್ದರು. ಹೆನ್ರಿಕ್ಸ್‌ರೊಂದಿಗೆ 40 ರನ್ ಸೇರಿಸಿ ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟಿದ್ದ ಶಿಖರ್ ಧವನ್ ಕೂಡ ಅರ್ಧಶತಕ ಬಾರಿಸಿದ್ದರು. ಹೈದರಾಬಾದ್ ತಂಡದ ಬೌಲಿಂಗ್ ವಿಭಾಗದಲ್ಲಿ ಹಿರಿಯ ಬೌಲರ್ ಆಶೀಷ್ ನೆಹ್ರಾ, ಭುವನೇಶ್ವರ ಕುಮಾರ್, ಬೆನ್ ಕಟ್ಟಿಂಗ್ ಹಾಗೂ ಅಫ್ಘಾನ್ ಸ್ಪಿನ್ನರ್ ರಶೀದ್ ಖಾನ್ ಅವರಿದ್ದಾರೆ.
ಗುಜರಾತ್ ತಂಡ ಹೈದರಾಬಾದ್ ವಿರುದ್ಧದ ಪಂದ್ಯವನ್ನು ಜಯಿಸಲು ರಣತಂತ್ರ ರೂಪಿಸುತ್ತಿದ್ದು, ಕೆಕೆಆರ್ ವಿರುದ್ಧ ಕಳಪೆ ಪ್ರದರ್ಶನ ನೀಡಿದ್ದ ಡ್ವೇಯ್ನಿ ಸ್ಮಿತ್ ಬದಲಿಗೆ ಆಸೀಸ್‌ನ ಆಲ್‌ರೌಂಡರ್ ಜೇಮ್ಸ್ ಫಾಕ್ನರ್‌ರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಜೇಸನ್ ರಾಯ್ ಹಾಗೂ ಬ್ರೆಂಡನ್ ಮೆಕಲಮ್ ಇನಿಂಗ್ಸ್ ಆರಂಭಿಸಲಿದ್ದಾರೆ. ಗುಜರಾತ್ ತಂಡದಲ್ಲಿ ಡ್ವೇಯ್ನಾ ಬ್ರಾವೊ ಹಾಗೂ ರವೀಂದ್ರ ಜಡೇಜರ ಅನುಪಸ್ಥಿತಿ ಕಾಡುತ್ತಿದೆ. ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್ ಹಾಗೂ ನಾಯಕ ಸುರೇಶ್ ರೈನಾ ಉತ್ತಮ ಟಚ್‌ನಲ್ಲಿದ್ದಾರೆ. ಆದರೆ, ಗುಜರಾತ್ ತಂಡ ಬೌಲಿಂಗ್ ವಿಭಾಗದಲ್ಲಿ ಭಾರೀ ಬದಲಾವಣೆ ಮಾಡುವುದು ಖಚಿತ.
ಶಿವಿಲ್ ಕೌಶಿಕ್ ಹಾಗೂ ಧವಳ್ ಕುಲಕರ್ಣಿ ಅವರನ್ನೊಳಗೊಂಡ ಗುಜರಾತ್ ಬೌಲಿಂಗ್ ವಿಭಾಗ ಕೆಕೆಆರ್ ವಿರುದ್ಧ ಮೊದಲ ಪಂದ್ಯದಲ್ಲಿ ರನ್‌ಗೆ ಕಡಿವಾಣ ಹ ಹಾಕಲು ವಿಫಲರಾಗಿದ್ದರು.
ಪಂದ್ಯದ ಸಮಯ: ಸಂಜೆ 4:00
ಕೆಕೆಆರ್‌ಗೆ ಮುಂಬೈ ಎದುರಾಳಿ
ಮುಂಬೈ, ಎ.8: ಪುಣೆ ವಿರುದ್ಧ ಆಡಿರುವ ಐಪಿಎಲ್‌ನ ತನ್ನ ಮೊದಲ ಪಂದ್ಯದಲ್ಲಿ ಸೋತು ಹಿನ್ನಡೆ ಅನುಭವಿಸಿರುವ ಮುಂಬೈ ಇಂಡಿಯನ್ಸ್ ತಂಡ ರವಿವಾರ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.
ಗುಜರಾತ್ ವಿರುದ್ಧ ಶುಕ್ರವಾರ ರಾತ್ರಿ ನಡೆದಿದ್ದ ಐಪಿಎಲ್ ಪಂದ್ಯದಲ್ಲಿ 10 ವಿಕೆಟ್‌ಗಳ ಜಯ ಸಾಧಿಸಿ ಇತಿಹಾಸ ನಿರ್ಮಿಸಿದ್ದ ಕೆಕೆಆರ್ ತಂಡ ಮುಂಬೈ ವಿರುದ್ಧವೂ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ.
ತಂಡಕ್ಕೆ ಸೇರ್ಪಡೆಯಾಗಿರುವ ವೇಗದ ಬೌಲರ್ ಲಸಿತ್ ಮಾಲಿಂಗ ಕಿವೀಸ್‌ನ ಟಿಮ್ ಸೌಥಿ ಬದಲಿಗೆ ಆಡಲಿದ್ದಾರೆ. ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್‌ಗಳನ್ನು (143)ಕಬಳಿಸಿರುವ ಮಾಲಿಂಗ ಡೆತ್ ಓವರ್‌ನಲ್ಲಿ ತಂಡಕ್ಕೆ ನೆರವಾಗಲಿದ್ದಾರೆ. 125 ಪಂದ್ಯಗಳಲ್ಲಿ 119 ವಿಕೆಟ್‌ಗಳನ್ನು ಉರುಳಿಸಿದ್ದ ಇನ್ನೋರ್ವ ಅನುಭವಿ ಆಟಗಾರ ಹರ್ಭಜನ್ ಸಿಂಗ್ ಕ್ರನಾಲ್ ಪಾಂಡ್ಯರ ಸ್ಥಾನದಲ್ಲಿ ಆಡುವ ಸಾಧ್ಯತೆಯಿದೆ.
ಲಯನ್ಸ್ ತಂಡದ ವಿರುದ್ಧ ಅಬ್ಬರಿಸಿದ್ದ ಕೆಕೆಆರ್‌ನ ಕ್ರಿಸ್ ಲಿನ್(93 ರನ್, 41 ಎಸೆತ) ಹಾಗೂ ನಾಯಕ ಗೌತಮ್ ಗಂಭೀರ್(76) ಮುಂಬೈಗೆ ಮತ್ತೆ ತಲೆನೋವಾಗುವ ನಿರೀಕ್ಷೆಯಿದೆ.
ಕೆಕೆಆರ್‌ನ ಉಪ ನಾಯಕ ಸೂರ್ಯಕುಮಾರ್ ಯಾದವ್‌ಗೆ ವಾಂಖೆಡೆ ಸ್ಟೇಡಿಯಂನಲ್ಲಿ ಬಹಳಷ್ಟು ದೇಶೀಯ ಪಂದ್ಯಗಳನ್ನು ಆಡಿದ ಅನುಭವವಿದೆ.
ರೋಹಿತ್ ಶರ್ಮ ಪುಣೆ ವಿರುದ್ಧ ಪಂದ್ಯದಲ್ಲಿ ದಕ್ಷಿಣ ಆಫ್ರಿಕದ ಸ್ಪಿನ್ನರ್ ತಾಹಿರ್ ದಾಳಿಗೆ ಸಿಲುಕಿ ವಿಕೆಟ್ ಒಪ್ಪಿಸಿದ್ದರು. ಕೆಕೆಆರ್ ತಂಡದಲ್ಲಿ ಪಿಯೂಷ್ ಚಾವ್ಲಾ ಹಾಗೂ ಕುಲ್‌ದೀಪ್ ಯಾದವ್‌ರಂತಹ ಸ್ಪಿನ್ನರ್‌ಗಳಿದ್ದಾರೆ. ಮುಂಬೈನ ಅಗ್ರ ಸರದಿಯ ದೌರ್ಬಲ್ಯದ ಲಾಭ ಪಡೆಯಲು ಎದುರು ನೋಡುತ್ತಿದ್ದಾರೆ.
ಪಂದ್ಯದ ಸಮಯ: ರಾತ್ರಿ:8:00.







