ಕ್ರಿಮಿನಲ್ ಪ್ರಕರಣ ದಾಖಲಿಸಲು ಒತ್ತಾಯ
ಖುರೇಷಿ ಮೇಲಿನ ದೌರ್ಜನ್ಯ ಪ್ರಕರಣ
ಮಂಗಳೂರು, ಎ.8: ಅಹ್ಮದ್ ಖುರೇಷಿಯನ್ನು ಆರು ದಿನಗಳ ಕಾಲ ಅಕ್ರಮ ಬಂಧನದಲ್ಲಿರಿಸಿ ದೌರ್ಜನ್ಯ ನಡೆಸಿ ಎರಡೂ ಕಿಡ್ನಿಗಳು ವೈಫಲ್ಯಗೊಳ್ಳಲು ಕಾರಣರಾದ ಸಿಸಿಬಿ ಪೊಲೀಸ್ ನಿರೀಕ್ಷಕ ಸುನೀಲ್ ನಾಯ್ಕಿ, ಎಸ್ಸೈ ಶಾಮ್ ಸುಂದರ್ ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಖುರೇಷಿಯ ಹಿರಿಯ ಸಹೋದರ ಮುಹಮ್ಮದ್ ನಿಶಾದ್ ಆಗ್ರಹಿಸಿದ್ದಾರೆ.
ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ತನ್ನ ಸಹೋದರನಿಗೆ ಆಗಿರುವ ಅನ್ಯಾಯ ಯಾರಿಗೂ ಆಗಬಾರದು. ತಮ್ಮನಿಗೆ ನ್ಯಾಯ ಸಿಗುವವರೆಗೆ ಹೋರಾಟ ಮಾಡುತ್ತೇನೆ ಎಂದರಲ್ಲದೆ, ಪೊಲೀಸರ ಚಿತ್ರಹಿಂಸೆಯಿಂದ ಇನ್ನೂ ಚೇತರಿಸಿಕೊಳ್ಳದ ಖುರೇಷಿಗೆ ಜೀವನಾಧಾರಕ್ಕಾಗಿ ಪರಿಹಾರ ಕಲ್ಪಿಸಬೇಕು. ಎಲ್ಲ ವ್ಯೆದ್ಯಕೀಯ ಖರ್ಚುಗಳನ್ನು ಸರಕಾರ ಭರಿಸಬೇಕೆಂದು ಆಗ್ರಹಿಸಿದರು.
ಮಾರ್ಚ್ 21ರಂದು ನ್ಯಾಯಾಲಯಕ್ಕೆ ಆಗಮಿಸಿದ್ದ ಖುರೇಷಿ ಅವರನ್ನು ಸಿಸಿಬಿ ಪೊಲೀಸರು ಕೋರ್ಟ್ ಆವರಣದಿಂದ ಕರೆದುಕೊಂಡು ಹೋಗಿದ್ದಾರೆ. ಆತ ಮಧ್ಯಾಹ್ನ ನ್ಯಾಯಾಧೀಶರ ಮುಂದೆ ಹಾಜರಾಗಬೇಕಿತ್ತು. ಈ ವಿಷಯವನ್ನು ಕೋರ್ಟ್ ಗಮನಕ್ಕೆ ನಾವು ತಂದಿದ್ದು, ಖುರೇಷಿ ಅವರನ್ನು ಸಿಸಿಬಿ ಪೊಲೀಸರು ಕರೆದುಕೊಂಡು ಹೋಗಿರುವುದಾಗಿ ಬರಹದ ಮೂಲಕ ತಿಳಿಸಿದ್ದೇವೆ ಎಂದರು.
ಮಾ.27ರಂದು ಆತನನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಆದರೆ, ಅವರು ಹಿಂದಿನ ದಿನ ಬಂಧಿಸಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೆ, ಚಿತ್ರಹಿಂಸೆ ನೀಡಿರುವ ವಿಷಯವನ್ನು ಬಹಿರಂಗಪಡಿಸಿದರೆ ಎನ್‌ಕೌಂಟರ್ ಮಾಡುವ ಮತ್ತು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ತಿಕ್‌ರಾಜ್ ಕೊಲೆ ಪ್ರಕರಣದಲ್ಲಿ ಫಿಕ್ಸ್ ಮಾಡುವ ಬೆದರಿಕೆ ಹಾಕಿದ್ದಾರಲ್ಲದೆ, ನ್ಯಾಯಾಧೀಶರ ಮುಂದೆ ಹಾಜರುಪಡಿಸುವಾಗ ಅಪಘಾತದಿಂದ ಗಾಯಗಳಾಗಿವೆ ಎಂದು ಸುಳ್ಳು ಹೇಳುವಂತೆ ಬಲವಂತ ಮಾಡಿದ್ದಾರೆ ಎಂದು ಖುರೇಷಿ ತನಗೆ ತಿಳಿಸಿರುವುದಾಗಿ ನಿಶಾದ್ ವಿವರಿಸಿದರು. ಖುರೇಷಿ ಪರ ವಕೀಲ ಅಶ್ರಫ್ ಅಗ್ನಾಡಿ ಮಾತನಾಡಿ, ಪೊಲೀಸರು ಮಾ.21ರಂದು ಖುರೇಷಿಯನ್ನು ಬಂಧಿಸಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಆತನನ್ನು ಮಾ.21ರಂದು ಕೋರ್ಟ್ ಆವರಣದಿಂದ ಸಿಸಿಬಿ ಪೊಲೀಸರು ಕರೆದುಕೊಂಡು ಹೋಗಿರುವ ಬಗ್ಗೆ ಅದೇ ದಿನ ಅವರ ವಕೀಲರು ನ್ಯಾಯಾಲಯಕ್ಕೆ ಮೆಮೋ ಸಲ್ಲಿಸಿದ್ದು ದಾಖಲಾಗಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿ ಖುರೇಷಿಗೆ ಮಾ.21ರಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರುಪಡಿಸುವ ಮುಂಚೆಯೇ ಸಿಸಿಬಿ ಪೊಲೀಸರು ಆತನನ್ನು ಬಂಧಿಸಿ ಕರೆದುಕೊಂಡು ಹೋಗಿರುವ ಬಗ್ಗೆ ಅವರ ವಕೀಲರು ಮೆಮೋ ನ್ಯಾಯಾಧೀಶರ ಗಮನಕ್ಕೆ ತಂದಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಖುರೇಷಿ ಅವರ ತಂದೆ ಮಾತನಾಡಿ, ತನ್ನ ಮಗನಿಗೆ ನ್ಯಾಯ ಕೊಡಿಸಬೇಕೆಂದು ಮಾಧ್ಯಮದವರಲ್ಲಿ ಮನವಿ ಮಾಡಿದರು.







