ಉಪ ಚುನಾವಣೆ; ಶ್ರೀನಗರದಲ್ಲಿ ಮತಗಟ್ಟೆಯ ಮೇಲೆ ಉಗ್ರರಿಂದ ಪೆಟ್ರೋಲ್ ಬಾಂಬ್ , ಘರ್ಷಣೆಯಲ್ಲಿ 3 ಸಾವು

ಹೊಸದಿಲ್ಲಿ, ಎ.9: ದೇಶದ 9 ರಾಜ್ಯಗಳ 10 ವಿಧಾನಸಭೆ ಕ್ಷೇತ್ರ ಮತ್ತು ಒಂದು ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆಯ ಮತದಾನ ನಡೆಯುತ್ತಿದ್ದು, ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಲೋಕಸಭಾ ಕ್ಷೇತ್ರದ ಬುದ್ಗಾಂವ್ ಮತಗಟ್ಟೆ ಮೇಲೆ ಉಗ್ರರು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಮತದಾನದ ವೇಳೆ ಸಂಭವಿಸಿದ ಘರ್ಷಣೆಯಲ್ಲಿ ಮೂವರು ಮೃತಪಟ್ಟ ಘಟನೆ ವರದಿಯಾಗಿದೆ.
ಶ್ರೀನಗರ ಲೋಕಸಭಾ ಕ್ಷೇತ್ರದ ಬುದ್ಗಾಂವ್ ನ ಮತಗಟ್ಟೆಯ ಮೇಲೆ ಉಗ್ರರು ಪೆಟ್ರೋಲ್ ಬಾಂಬ್ ಎಸೆದು ಭಯದ ವಾತಾವರಣ ಸೃಷ್ಟಿಸಿದ್ದಾರೆ.
ಬುದ್ಗಾಂವ್ ಜಿಲ್ಲೆಯ ದಲ್ವಾನ್ ಗ್ರಾಮದಲ್ಲಿ ಭದ್ರತಾ ಪಡೆಗಳು ಮತ್ತು ಪ್ರತಿಭಟನೆಕಾರರ ನಡುವಿನ ಘರ್ಷಣೆಯಲ್ಲಿ ಮೂವರು ಭಧ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ.
ಪ್ರತಿಭಟನಾಕಾರರಿಗೆ ಸ್ಥಳದಿಂದ ತೆರಳುವಂತೆ ಯೋಧರು ಸೂಚನೆ ನೀಡಿದಾಗ . ಯೋಧರ ಮೇಲೆ ಪ್ರತಿಭಟನೆಕಾರರು ಕಲ್ಲು ತೂರಾಟ ನಡೆಸಿದ್ದಾರೆ. ಆಗ ಯೋಧರು ಪರಿಸ್ಥಿತಿಯನ್ನು ನಿಯಂತ್ರಿಸಲು ಗುಂಡು ಹಾರಿಸಿದ್ದಾರೆ. ಸೇನೆಯ ಗುಂಡೇಟಿಗೆ ಸಿಲುಕಿ 20 ವರ್ಷದ ಮುಹಮ್ಮದ್ ಅಬ್ಬಾಸ್ , 15 ವರ್ಷದ ಫೈಜಾನ್ ಅಹಮದ್ ಮತ್ತು ನಹೀರ್ ಅಹ್ಮದ್ ಮಿರ್ ಮೃತಪಟ್ಟಿದ್ದಾರೆ..
ಹಿಮಾಚಲ ಪ್ರದೇಶದ ಭೋರಂಜ್ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದ್ದು, ಬೂತ್ ನಂ.51ರಲ್ಲಿ ಮತಗಟ್ಟೆಯ ಇವಿಎಂ ಯಂತ್ರ ಹಾಳಾಗಿದೆ.







