ಇತರರಿಗೆ ಹೋಲಿಸಿದರೆ ಮುಸ್ಲಿಮರಲ್ಲಿ ವಿಚ್ಛೇದನ ಪ್ರಕರಣಗಳು ಕಡಿಮೆ : ವರದಿ

ಜೈಪುರ(ರಾಜಸ್ಥಾನ),ಎ.9: ಇತರ ಸಮುದಾಯಗಳಿಗೆ ಹೋಲಿಸಿದರೆ ಮುಸ್ಲಿಮರಲ್ಲಿ ವಿಚ್ಛೇದನಗಳು ಕಡಿಮೆ ಮತ್ತು ತ್ರಿವಳಿ ತಲಾಖ್ ವಿಷಯವನ್ನು ತಪ್ಪು ಅರ್ಥದಲ್ಲಿ ಬಿಂಬಿಸಲಾಗುತ್ತಿದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಮಹಿಳಾ ಘಟಕವು ಹೇಳಿದೆ.
ದೇಶದಲ್ಲಿಯ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಕೆಲವು ಜಿಲ್ಲೆಗಳಲ್ಲಿಯ ಕುಟುಂಬ ನ್ಯಾಯಾಲಯಗಳಿಂದ ಸಂಗ್ರಹಿಸಲಾದ ದತ್ತಾಂಶಗಳನ್ನು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡ ಮಹಿಳಾ ಘಟಕದ ಮುಖ್ಯ ಸಂಘಟಕಿ ಆಸ್ಮಾ ರೊಹ್ರಾ ಅವರು, ವಿಚ್ಛೇದನ ಕೋರುವ ಮುಸ್ಲಿಂ ಮಹಿಳೆಯರ ಶೇಕಡವಾರು ಪ್ರಮಾಣ ಕಡಿಮೆಯಿದ್ದು, ಇದು ಇಸ್ಲಾಮ್‌ನಡಿ ಮಹಿಳೆಯರು ಸುರಕ್ಷಿತವಾಗಿದ್ದಾರೆ ಎನ್ನುವುದನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ತ್ರಿವಳಿ ತಲಾಖ್ ಕುರಿತು ನಡೆಯುತ್ತಿರುವ ಚರ್ಚೆಗಳ ನಡುವೆಯೇ ಈ ಹೇಳಿಕೆ ಹೊರಬಿದ್ದಿದೆ. ಈ ವಿಷಯವು ಸರ್ವೋಚ್ಚ ನ್ಯಾಯಾಲಯದ ಮುಂದೆ ಇದ್ದು, ಅದು ಈ ಪದ್ಧತಿಯ ಕಾನೂನು ಮಗ್ಗಲುಗಳನ್ನು ಪರಿಶೀಲಿಸುತ್ತಿದೆ.
ಆರ್‌ಟಿಐ ಕಾಯ್ದೆಯಡಿ ಕುಟುಂಬ ನ್ಯಾಯಾಲಯಗಳಿಂದ 2011-2015ರ ಅವಧಿಯ ಅಂಕಿಸಂಖ್ಯೆಗಳನ್ನು ಪಡೆದುಕೊಳ್ಳಲಾಗಿದೆ. 16 ಕುಟುಂಬ ನ್ಯಾಯಾಲಯಗಳು ವರದಿಗಳನ್ನು ನೀಡಿದ್ದು, ಮುಸ್ಲಿಂ ಸಮುದಾಯದಲ್ಲಿ ವಿಚ್ಛೇದನ ಪ್ರಕರಣಗಳು ಕನಿಷ್ಠ ಪ್ರಮಾಣದಲ್ಲಿವೆ ಎನ್ನುವುದನ್ನು ಅವು ಬೆಟ್ಟು ಮಾಡಿವೆ. ವಿವಿಧ ದಾರುಲ್ ಖಾಝಾ (ಇಸ್ಲಾಮಿಕ್ ಶರೀಯತ್ ನ್ಯಾಯಾಲಯ)ಗಳಿಂದಲೂ ನಾವು ವಿವರಗಳನ್ನು ಸಂಗ್ರಹಿಸಿದ್ದು, ಕೇವಲ ಶೇ.2-3ರಷ್ಟು ಪ್ರಕರಣಗಳು ವಿಚ್ಛೇದನಗಳಿಗೆ ಸಂಬಂಧಿಸಿವೆ ಮತ್ತು ಅವುಗಳ ಪೈಕಿ ಹೆಚ್ಚಿನವುಗಳಲ್ಲಿ ಮಹಿಳೆಯರೇ ಮೊದಲಾಗಿ ವಿಚ್ಛೇದನ ಕೋರಿದ್ದಾರೆ ಎಂದು ರೊಹ್ರಾ ತಿಳಿಸಿದರು. ಈ ಎಲ್ಲ ದತ್ತಾಂಶಗಳನ್ನು ಆಧರಿಸಿ ಮುಸ್ಲಿಂ ಮಹಿಳಾ ಸಂಶೋಧನಾ ಕೇಂದ್ರ ಮತ್ತು ಶರಿಯಾ ಮಹಿಳಾ ಸಮಿತಿ ಸಿದ್ಧಪಡಿಸಿರುವ ವರದಿಯಂತೆ ಈ ಜಿಲ್ಲೆಗಳಲ್ಲಿ ಮುಸ್ಲಿಮರಲ್ಲಿ 1,307 ವಿಚ್ಛೇದನ ಪ್ರಕರಣಗಳಿದ್ದರೆ, ಹಿಂದುಗಳಲ್ಲಿ 16,505, ಕ್ರೈಸ್ತರಲ್ಲಿ 4,827 ಮತ್ತು ಸಿಖ್‌ರಲ್ಲಿ 8 ವಿಚ್ಛೇದನ ಪ್ರಕರಣಗಳು ನಡೆದಿವೆ. ಈ ಅಂಕಿಸಂಖ್ಯೆಗಳು ಮುಸ್ಲಿಮರ ಬಾಹುಳ್ಯವಿರುವ ಕೇರಳದ ಕಣ್ಣೂರು, ಮಲಪ್ಪುರಂ, ಎರ್ನಾಕುಲಂ ಮತ್ತು ಪಾಲಕ್ಕಾಡ್, ಮಹಾರಾಷ್ಟ್ರದ ನಾಸಿಕ್, ತೆಲಂಗಾಣದ ಕರೀಂನಗರ ಮತ್ತು ಸಿಕಂದರಾಬಾದ್ ಹಾಗೂ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಗಳಿಗೆ ಸಂಬಂಧಿಸಿವೆ.
ತ್ರಿವಳಿ ತಲಾಖ್‌ನ್ನು ಇತ್ತೀಚಿನ ದಿನಗಳಲ್ಲಿ ಕೆದಕಲಾಗಿದ್ದು, ಅದನ್ನು ರಾಜಕೀಕರಿಸ ಲಾಗುತ್ತಿದೆ. ಈ ವಿಷಯವನ್ನು ಸೂಕ್ತ ರೀತಿಯಲ್ಲಿ ಮತ್ತು ಸರಿಯಾದ ಅರ್ಥದಲ್ಲಿ ತಿಳಿದುಕೊಳ್ಳಬೇಕಾಗಿದೆ. ಇಸ್ಲಾಂ ಮಹಿಳೆಯರಿಗೆ ಕೆಲವು ಸ್ವಾತಂತ್ರ್ಯಗಳನ್ನು ನೀಡಿದೆ ಮತ್ತು ಸಮುದಾಯದಲ್ಲಿ ಅವರಿಗೆ ಒಳ್ಳೆಯ ರಕ್ಷಣೆಯಿದೆ ಎಂದು ರೊಹ್ರಾ ಹೇಳಿದರು.
ಮಹಿಳೆಯರನ್ನು ಕಾಡುತ್ತಿರುವ ವರದಕ್ಷಿಣೆ ,ಕೌಟುಂಬಿಕ ಹಿಂಸೆ, ಬಾಲ್ಯವಿವಾಹ, ಹೆಣ್ಣು ಭ್ರೂಣ ಹತ್ಯೆಯಂತಹ ಜ್ವಲಂತ ಸಮಸ್ಯೆಗಳು ಎಲ್ಲ ಸಮುದಾಯಗಳಲ್ಲಿಯೂ ಇವೆ. ಮುಸ್ಲಿಂ ಸಮುದಾಯದತ್ತ ಬೆಟ್ಟುಮಾಡುವ ಮೊದಲು ಈ ಸಮಸ್ಯೆಗಳನ್ನು ಬಗೆಹರಿಸ ಬೇಕಾದ ಅಗತ್ಯವಿದೆ ಎಂದರು.