ಬ್ರಿಟಿಷ್-ಇಂಡಿಯನ್ ಶಿಕ್ಷಣತಜ್ಞೆಗೆ ವರ್ಷದ ಏಷ್ಯನ್ ಮಹಿಳಾ ಉದ್ಯಮಿ ಗೌರವ

ಲಂಡನ್,ಎ.9: ಭಾರತದ ಬಿಹಾರ ಮೂಲದ ಆಶಾ ಖೇಮ್ಕಾ ಅವರು 1978ರಲ್ಲಿ ತನ್ನ ಕುಟುಂಬದೊಂದಿಗೆ ಬ್ರಿಟನ್ನಿಗೆ ಬಂದಾಗ ಅವರಿಗೆ ಇಂಗ್ಲಿಷ್ ಅಷ್ಟಾಗಿ ಗೊತ್ತಿರಲಿಲ್ಲ. ಆದರೂ ಅವರು ಓರ್ವ ಶಿಕ್ಷಣತಜ್ಞೆಯಾಗಿ ಸಾವಿರಾರು ಜನರ ಬದುಕುಗಳನ್ನು ಬದಲಿಸುತ್ತಲೇ ಸಾಗಿದರು. ಶುಕ್ರವಾರ ಬರ್ಮಿಂಗ್‌ಹ್ಯಾಂನ ಎಜ್‌ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಐದನೇ ವಾರ್ಷಿಕ ಏಷ್ಯನ್ ಬಿಸಿನೆಸ್ ಆವಾರ್ಡ್ಸ್ ಮಿಡ್‌ಲ್ಯಾಂಡ್ಸ್ ಕಾರ್ಯಕ್ರಮದಲ್ಲಿ ‘ವರ್ಷದ ಏಷ್ಯನ್ ಮಹಿಳಾ ಉದ್ಯಮಿ ’ಗೌರವಕ್ಕೆ ಪಾತ್ರರಾಗಿದ್ದಾರೆ.
2014ರಲ್ಲಿ ಬ್ರಿಟನ್ನಿನ ಅತ್ಯುನ್ನತ ನಾಗರಿಕ ಪುರಸ್ಕಾರಗಳಲ್ಲೊಂದಾದ ನೈಟ್‌ಹುಡ್‌ಗೆ ಸಮನಾದ ಮಹಿಳಾ ಪ್ರಶಸ್ತಿ ‘ಡೇಮ್ ’ಅನ್ನು ತನ್ನ ಮುಡಿಗೇರಿಸಿಕೊಂಡಿದ್ದ ಖೇಮ್ಕಾ ಅಂದಿನಿಂದಲೂ ನಾಟಿಂಗ್‌ಹ್ಯಾಂನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ತನ್ನ ಕಾರ್ಯಗಳಿಗಾಗಿ ಹಲವಾರು ಪುರಸ್ಕಾರಗಳನ್ನು ಗೆದ್ದಿದ್ದಾರೆ.
ಮಿಡ್‌ಲ್ಯಾಂಡ್ಸ್ ಪ್ರದೇಶವನ್ನು ಕೇಂದ್ರೀಕರಿಸಿರುವ ಈ ವರ್ಷದ ಏಷ್ಯನ್ ರಿಚ್ ಲಿಸ್ಟ್ ನಲ್ಲಿ ಬೋಪಾರನ್ ಕುಟುಂಬ(ಆಹಾರ ತಯಾರಿಕೆ-900 ಮಿ.ಪೌಂಡ್) ಮತ್ತು ಸ್ವರಾಜ್ ಪಾಲ್(ಕಪಾರೋ ಗ್ರುಪ್-800 ಮಿ.ಪೌಂಡ್) ಅವರು ಪ್ರಮುಖರಾಗಿದ್ದಾರೆ.