ದೇಶದೊಳಗೆ ವಿಮಾನದಲ್ಲಿ ಪ್ರಯಾಣಿಸಲು ಆಧಾರ್ ಕಡ್ಡಾಯ ?

ಹೊಸದಿಲ್ಲಿ,ಎ. 9: ಸರಕಾರವು ದೇಶದೊಳಗೆ ವಿಮಾನದಲ್ಲಿ ಪ್ರಯಾಣಿಸಲು ಶೀಘ್ರವೇ ಆಧಾರ್ ಅಥವಾ ಪಾಸ್‌ಪೋರ್ಟ್ ಕಡ್ಡಾಯಗೊಳಿಸುವ ಸಾಧ್ಯತೆಗಳಿವೆ. ಉದ್ದೇಶಿತ ಪ್ರಯಾಣ ನಿಷೇಧ ಪಟ್ಟಿಗೆ ಅನುಗುಣವಾಗಿ ಪ್ರಯಾಣಿಕರನ್ನು ಗುರುತಿಸಲು ದೋಷರಹಿತ ಪದ್ಧತಿಯನ್ನು ಜಾರಿಗೊಳಿಸಲು ಕ್ರಮವನ್ನು ಕೈಗೊಳ್ಳಬಹುದಾಗಿದೆ ಎಂದು ಕೇಂದ್ರ ವಿಮಾನಯಾನ ಸಚಿವಾಲಯದ ಮೂಲಗಳು ತಿಳಿಸಿವೆ. ಟಿಕೆಟ್ ಬುಕ್ ಮಾಡುವಾಗ ಗುರುತು ಮಾಹಿತಿಗಳನ್ನು ಸಂಗ್ರಹಿಸುವ ವ್ಯವಸ್ಥೆಯನ್ನುಮುಂದಿನ ಮೂರು ತಿಂಗಳೊಳಗೆ ಜಾರಿಗೆ ತರುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.
ಅಪರಾಧಗಳ ತೀವ್ರತೆಯಂತೆ ನಿಷೇಧ ಪಟ್ಟಿಯಲ್ಲಿ ಪ್ರಯಾಣಿಕರನ್ನು ನಾಲ್ಕು ವಿಭಾಗದಲ್ಲಿ ವಿಂಗಡಿಸಲಾಗುವುದು. ನಿಷೇಧ ಪಟ್ಟಿ ಜಾರಿಗೆ ತರಲು ಎಲ್ಲ ಪ್ರಯಾಣಿಕರ ವಿವರಗಳು ಲಭ್ಯವಾಗುವುದು ಮುಖ್ಯವಾಗಿದೆ. ವಿಮಾನ ಟಿಕೆಟ್ ಬುಕ್ ಮಾಡುವ ವೇಳೆ ಆಧಾರ್ ಅಥವಾ ಪಾಸ್‌ಪೋರ್ಟ್ ನಂಬರ್ ಸೇರಿಸುವುದು ಅಗತ್ಯವಾಗಬಹುದು ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾಗರಿಕ ವಿಮಾನಯಾನ(ಸಿಎಆರ್) ಅಗತ್ಯಗಳ ಕರಡನ್ನು ಮುಂದಿನ ವಾರ ಪ್ರಕಟಿಸುವ ಸಾಧ್ಯತೆಯಿದ್ದು, ಸಾರ್ವಜನಿಕರು 30 ದಿವಸಗಳಲ್ಲಿ ತಮ್ಮ ಸಲಹೆಗಳನ್ನು ತಿಳಿಸಬಹುದಾಗಿದೆ. ಜುಲೈಯಿಂದ ನೂತನ ವ್ಯವಸ್ಥೆ ಜಾರಿಗೆ ಬರಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







