ಸಂದೀಪ್ ಸಾವಿಗೆ ಮೆದುಳಿನ ರಕ್ತಸ್ರಾವ ಕಾರಣ: ಮರಣೋತ್ತರ ಪರೀಕ್ಷಾ ವರದಿ

ಕಾಸರಗೋಡು, ಎ.9: ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದರಿಂದ ಪರಾರಿಯಾಗಲೆತ್ನಿಸಿ ಕುಸಿದುಬಿದ್ದು ಮೃತಪಟ್ಟಿದ್ದ ಆಟೊ ಚಾಲಕ ಸಂದೀಪ್ ಅವರ ಸಾವಿಗೆ ಮೆದುಳಿನ ರಕ್ತಸ್ರಾವ ಕಾರಣ ಎಂದು ಮರಣೋತ್ತರ ಪರೀಕ್ಷಾ ವರದಿ ತಿಳಿಸಿದೆ.
ಶುಕ್ರವಾರ ಸಂಜೆ ಬೀರಂತಬೈಲ್ ನ ಕೃಷಿ ಕೇಂದ್ರದ ಸಮೀಪ ಮದ್ಯಪಾನ ಮಾಡುತ್ತಿದ್ದ ಸಂದರ್ಭ ಪೊಲೀಸರು ದಾಳಿ ನಡೆಸಿದ್ದು, ಸಂದೀಪ್ ಸೇರಿದಂತೆ ನಾಲ್ವರು ಪರಾರಿಯಾಗಲೆತ್ನಿಸಿದ್ದಾರೆ. ಈ ಸಂದರ್ಭ ಸಂದೀಪ್ ಕುಸಿದುಬಿದ್ದಿದ್ದರು. ಕೂಡಲೇ ಪೊಲೀಸರು ಸಂದೀಪ್ ರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಪೊಲೀಸ್ ದೌರ್ಜನ್ಯದಿಂದ ಸಂದೀಪ್ ಮೃತಪಟ್ಟಿರುವುದಾಗಿ ಬಿಜೆಪಿ ಹಾಗೂ ಬಿಎಂಎಸ್ ಆರೋಪಿಸಿತ್ತು. ಘಟನೆಯನ್ನು ಖಂಡಿಸಿ ಶನಿವಾರ ಕಾಸರಗೋಡಿನಲ್ಲಿ ಹರತಾಳ ನಡೆಸಿತ್ತು
ಕಾಸರಗೋಡು ಹೆಚ್ಚುವರಿ ದಂಡಾಧಿಕಾರಿ ಮತ್ತು ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ರಕ್ತದೊತ್ತಡದ ಹಿನ್ನೆಲೆಯಲ್ಲಿ ಮೆದುಳಿನಲ್ಲಿ ರಕ್ತಸ್ರಾವದಿಂದ ಸಂದೀಪ್ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿದ್ದು, ಪೂರ್ಣ ವರದಿ ಮಂಗಳವಾರ ಲಭಿಸಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.





