ಮಹಾಪುರುಷರ ಸಂದೇಶ ಯಾವುದೇ ಧರ್ಮಕ್ಕೆ ಸೀಮಿತವಲ್ಲ: ಮುನಿರಾಜ ರೆಂಜಾಳ
ಮಹಾವೀರ ಜಯಂತಿ ಆಚರಣೆ

ಮಂಗಳೂರು, ಎ.9: ಯಾವುದೇ ಸಾತ್ವಿಕರ, ಮಹಾಪುರುಷರ ಸಂದೇಶಗಳು ಒಂದು ಜಾತಿ, ಧರ್ಮಕ್ಕೆ ಸೀಮಿತವಲ್ಲ. ಅದು ಎಲ್ಲ ಕಾಲಕ್ಕೆ, ಎಲ್ಲ ಧರ್ಮೀಯರಿಗೂ ಅನುಕರಣೀಯ ಎಂದು ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಅಭಿಪ್ರಾಯಪಟ್ಟರು.
ದ.ಕ.ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜೈನ ಸೊಸೈಟಿಯ ಸಹಯೋಗದಲ್ಲಿ ನಗರದ ಬಜಿಲಕೇರಿ ಶ್ರೆ ಶಾಂತಿನಾಥ ಸ್ವಾಮಿ ಜೈನ ಬಸದಿಯಲ್ಲಿ ರವಿವಾರ ನಡೆದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಅವರು ಸಂದೇಶ ನೀಡಿದರು.
ಹಿಂಸೆ ತಾಂಡವವಾಡುತ್ತಿದ್ದ ಕಾಲಘಟ್ಟದಲ್ಲಿ ಅಹಿಂಸೆಯ ಸಂದೇಶವನ್ನು ಜಗತ್ತಿಗೆ ಸಾರಿದ ಮಹಾವೀರರು ಒಬ್ಬನಿಂದಲೂ ಸಾಮಾಜಿಕ ಪರಿವರ್ತನೆ ಸಾಧ್ಯ ಎಂಬುದನ್ನು ತಿಳಿಸಿಕೊಟ್ಟರು. ಅವರು ಹಾಕಿದ ಅಡಿಪಾಯದ ಮೇಲೆ ಜೈನ ಸಿದ್ಧಾಂತವನ್ನು ಅನುಸರಿಸುವಾತ ಎಂದಿಗೂ ಅನ್ಯ ಜಾತಿ, ಧರ್ಮದವರನ್ನು ವಿರೋಧಿಸಲು ಸಾಧ್ಯವಿಲ್ಲ. ವ್ಯಕ್ತಿ ತನ್ನ ಧರ್ಮವನ್ನು ಪ್ರೀತಿಸುವ ಜತೆಗೆ ಇನ್ನೊಂದು ಧರ್ಮವನ್ನು ಗೌರವಿಸಲು ಕಲಿಯಬೇಕು. ಆಗ ಮಾತ್ರ ಜಗತ್ತಿನಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಲು ಸಾಧ್ಯ ಎಂದು ನುಡಿದರು.
ಹುಬ್ಬಳ್ಳಿಯ ನೂರೆಂಟು ಪ್ರಸಂಗ ಸಾಗರ ಮುನಿ ಮಹಾರಾಜ್ ಆಶೀವರ್ಚನ ನೀಡಿದರು. ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಮಾತನಾಡಿ, ಶಾಂತಿ ಮತ್ತು ಅಹಿಂಸೆಯ ತತ್ವ ಸಾರ್ವಕಾಲಿಕ. ಜೈನರ ಅಹಿಂಸಾ ತತ್ವ ಜಗತ್ತಿಗೆ ಮಾದರಿಯಾಗಿದೆ ಎಂದರು.
ಶಾಸಕ ಜೆ.ಆರ್.ಲೋಬೊ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುರೇಶ್ ಬಲ್ಲಾಳ್ ಕಾರ್ಯಕ್ರಮ ಉದ್ಘಾಟಿಸಿದರು.
ಮಂಗಳೂರು ಸಹಾಯಕ ಆಯುಕ್ತ ರೇಣುಕಾ ಪ್ರಸಾದ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಜೈನ ಸೊಸೈಟಿಯ ಅಧ್ಯಕ್ಷ ಎಲ್.ಡಿ.ಬಲ್ಲಾಳ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಉಪಸ್ಥಿತರಿದ್ದರು.







