ಶ್ರೀನಗರದಲ್ಲಿ ಚುನಾವಣಾ ಹಿಂಸಾಚಾರ: ಗೋಲಿಬಾರ್‌ಗೆ ಆರು ಬಲಿ,ಹಲವರಿಗೆ ಗಾಯ

ಶ್ರಿನಗರ,ಎ.9: ರವಿವಾರ ಶ್ರೀನಗರ ಲೋಕಸಭಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯ ಸಂದರ್ಭ ವಿವಿಧೆಡೆಗಳಲ್ಲಿ ದಾಂಧಲೆ ನಡೆಸುತ್ತಿದ್ದ ಗುಂಪುಗಳ ಮೇಲೆ ಭದ್ರತಾ ಪಡೆಗಳು ನಡೆಸಿದ ಗೋಲಿಬಾರ್‌ನಲ್ಲಿ ಕನಿಷ್ಠ ಆರು ಜನರು ಕೊಲ್ಲಲ್ಪಟ್ಟಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ. ಹಿಂಸಾಚಾರದಲ್ಲಿ 100ಕ್ಕೂ ಅಧಿಕ ಭದ್ರತಾ ಸಿಬ್ಬಂದಿಗಳೂ ಗಾಯಗೋಂಡಿದ್ದಾರೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಶಾಂತಮನು ತಿಳಿಸಿದ್ದಾರೆ.
ಗಲಭೆಯು ಮತದಾನ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಿದ್ದು, ಕೇವಲ 6.5ರಷ್ಟು ಮತದಾನ ನಡೆದಿದೆ. ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಫಾರುಕ್ ಅಬ್ದುಲ್ಲಾ ಇಲ್ಲಿ ಎನ್‌ಸಿ ಅಭ್ಯಥಿಯಾಗಿದ್ದಾರೆ.
ಬಡ್ಗಾಮ್ ಜಿಲ್ಲೆಯ ಚರಾರ್-ಎ-ಶರೀಫ್ ಮತ್ತು ಬೀರ್ವ್ಹಾ ಪ್ರದೇಶಗಳಲ್ಲಿ ತಲಾ ಇಬ್ಬರು ಕೊಲ್ಲಲ್ಪಟ್ಟಿದ್ದರೆ, ಅದೇ ಜಿಲ್ಲೆಯ ಚಾದೂರಾ ಮತ್ತು ಮಗಮ್‌ಗಳಲ್ಲಿ ತಲಾ ಓರ್ವರು ಮೃತಪಟ್ಟಿದ್ದಾರೆ.
ಬಡ್ಗಾಮ್ ಜಿಲ್ಲೆಯ ಹಲವಾರು ಪ್ರದೇಶಗಳಲ್ಲಿ ಸರಣಿ ಹಿಂಸಾತ್ಮಕ ಪ್ರತಿಭಟನೆ ಗಳಿಂದಾಗಿ ಶೇ.70ರಷ್ಟು ಮತಗಟ್ಟೆಗಳಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಸಿಬ್ಬಂದಿಗಳು ಕಾಲಿಗೆ ಬುದ್ಧಿ ಹೇಳಿದ್ದರು.
ಶ್ರೀನಗರ ಕ್ಷೇತ್ರದ ಗಾಂದರ್‌ಬಾಲ್ ಜಿಲ್ಲೆಯಲ್ಲಿ ಕಲ್ಲುತೂರಾಟ ನಡೆಸುತ್ತಿದ್ದ ಮತ್ತು ಮತಗಟ್ಟೆಯೊಂದನ್ನು ಧ್ವಂಸಗೊಳಿಸಲು ಪೆಟ್ರೋಲ್ ಬಾಂಬ್‌ಗಳನ್ನು ಎಸೆಯುತ್ತಿದ್ದ ಗುಂಪೊಂದನ್ನು ಚದುರಿಸುವಲ್ಲಿ ಭದ್ರತಾ ಸಿಬ್ಬಂದಿಗಳಿಗೆ ನೆರವಾಗಲು ಸೇನೆಯನ್ನು ಕರೆಸಲಾಗಿತ್ತು.
ಬಡ್ಗಾಮ್ ಜಿಲ್ಲೆಯ ಚರಾರ್-ಎ-ಶರೀಫ್ ಪ್ರದೇಶದ ಪಖೇರಪೋರಾ ಎಂಬಲ್ಲಿ ಮತಗಟ್ಟೆಯೊಂದಕ್ಕೆ ದಾಳಿ ನಡೆಸಿದ ನೂರಾರು ಪ್ರತಿಭಟನಾಕಾರರು ಮತಗಟ್ಟೆಯಿದ್ದ ಕಟ್ಟಡವನ್ನು ಧ್ವಂಸಗೊಳಿಸಿದರು. ಭದ್ರತಾ ಪಡೆಗಳು ಹಲವಾರು ಎಚ್ಚರಿಕೆಯ ಗುಂಡುಗಳನ್ನು ಹಾರಿಸಿದ್ದವಾದರೂ ಪ್ರತಿಭಟನಾಕಾರರು ಹಿಮ್ಮೆಟ್ಟಿರಲಿಲ್ಲ. ಗೋಲಿಬಾರ್‌ನಲ್ಲಿ ಆರು ಜನರು ಗಾಯಗೊಂಡಿದ್ದು, ಈ ಪೈಕಿ ಮುಹಮ್ಮದ್ ಅಬ್ಬಾಸ್(20) ಮತ್ತು ಫೈಝಾನ್ ಅಹ್ಮದ್ ರಾಥೇರ್(15) ಬಳಿಕ ಕೊನೆಯುಸಿರೆಳೆದರು.
ರಕ್ಷುನಾ ಬೀರ್ವ್ಹಾ ಪ್ರದೇಶದಲ್ಲಿ ಕಲ್ಲುತೂರಾಟದಲ್ಲಿ ತೊಡಗಿದ್ದ ಗುಂಪನ್ನು ಚದುರಿಸಲು ಭದ್ರತಾ ಪಡೆಗಳು ನಡೆಸಿದ ಗೋಲಿಬಾರ್‌ನಲ್ಲಿನ ನಿಸಾರ್ ಅಹ್ಮದ್ ಎಂಬಾತ ಕೊಲ್ಲಲ್ಪಟ್ಟಿದ್ದರೆ, ಬಡ್ಗಾಮ್ ಜಿಲ್ಲೆಯ ಚಾದೂರಾ ವಿಧಾನಸಭಾ ಕ್ಷೇತ್ರದ ದೌಲತ್‌ಪುರದಲ್ಲಿ ಶಾಬಿರ್ ಅಹ್ಮದ್ ಎಂಬಾತ ಪೊಲೀಸ್ ಗುಂಡಿಗೆ ಬಲಿಯಾದ.
ಮಗಮ್ ಪಟ್ಟಣದಲ್ಲಿ ಪೆಲೆಟ್‌ಗಳಿಂದ ತೀವ್ರ ಗಾಯಗೊಂಡು ಆದಿಲ್ ಫಾರೂಕ್ ಎಂಬಾತ ಕೊನೆಯುಸಿರೆಳೆದಿದ್ದರೆ, ಆಕಿಬ್ ವಾನಿ ಎಂಬಾತ ಭೀರ್ವ್ಹಾದಲ್ಲಿ ಸಾವನ್ನಪ್ಪಿದ್ದಾನೆ.
ಮತಗಟ್ಟೆಗಳಲ್ಲಿ ಭದ್ರತೆಗಾಗಿ ನಿಯೋಜಿತರಾಗಿದ್ದ ಬಿಎಸ್‌ಎಫ್ ಸಿಬ್ಬಂದಿಗಳಿಗೆ ಪೆಲೆಟ್ ಗನ್‌ಗಳನ್ನು ಪೂರೈಸಿರಲಿಲ್ಲ, ಹೀಗಾಗಿ ಅವರು ಪ್ರತಿಭಟನಾಕಾರರ ವಿರುದ್ಧ ಸಜೀವ ಗುಂಡುಗಳನ್ನೇ ಹಾರಿಸಿದ್ದರು.
ಚಾದೂರಾ ಪ್ರದೇಶದಲ್ಲಿ ಎರಡು ಮತಗಟ್ಟೆಗಳ ಮೇಲೆ ಗುಂಪಿನ ಭಾರೀ ಕಲ್ಲು ತೂರಾಟದಿಂದಾಗಿ ಭದ್ರತಾ ಪಡೆ ಸಿಬ್ಬಂದಿಗಳು ಅಲ್ಲಿಂದ ಕಾಲ್ತೆಗೆಯುವಂತಾಗಿತ್ತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.
ಶ್ರೀನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಶ್ರೀನಗರ, ಬಡ್ಗಾಮ್ ಮತ್ತು ಗಾಂದರ್‌ಬಾಲ್‌ಜಿಲ್ಲೆಗಳ ಸುಮಾರು ಎರಡು ಡಝನ್‌ಗೂ ಅಧಿಕ ಸ್ಥಳಗಳಲ್ಲಿ ಹಿಂಸಾಚಾರ ಮತ್ತು ಕಲ್ಲುತೂರಾಟದ ಘಟನೆಗಳು ವರದಿಯಾಗಿವೆ.
ಕ್ಷೇತ್ರದಲ್ಲಿ ಒಟ್ಟು 12.61 ಲಕ್ಷ ಮತದಾರರಿದ್ದು, ಈ ಪೈಕಿ ಕೇವಲ ಶೇ.6.5ರಷ್ಟು ಜನರು ಮತಗಳನ್ನು ಚಲಾಯಿಸಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಶಾಂತಮನು ಸುದ್ದಿಗಾರರಿಗೆ ತಿಳಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, 50 ರಿಂದ 100 ಅಥವಾ ಅದಕ್ಕೂ ಹೆಚ್ಚಿನ ಮತಗಟ್ಟೆಗಳಲ್ಲಿ ಮರುಮತದಾನ ನಡೆಯಬಹುದು ಎಂದು ತಿಳಿಸಿದರು.
ಎ.12ರಂದು ನಿಗದಿಯಾಗಿರುವ ಅನಂತನಾಗ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯು ಹೆಚ್ಚಿನ ಸವಾಲನ್ನು ಒಡ್ಡಲಿದೆ ಎಂದರು. ಮುಖ್ಯಮಂತ್ರಿ ಮೆಹಬೂಬ ಮುಫ್ತಿಯವರ ಕಿರಿಯ ಸೋದರ ತಸದುಕ್ ಮುಫ್ತಿ ಈ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿದಿದ್ದಾರೆ.
ತನ್ಮಧ್ಯೆ ಪ್ರತಿಪಕ್ಷ ನ್ಯಾಷನಲ್ ಕಾನ್ಫರೆನ್ಸ್‌ನ ನಾಯಕರಾದ ಫಾರೂಕ್ ಅಬ್ದುಲ್ಲಾ ಮತ್ತು ಅವರ ಪುತ್ರ ಉಮರ್ ಅಬ್ದುಲ್ಲಾ ಅವರು ಚುನಾವಣೆಯನ್ನು ಸುಗಮವಾಗಿ ನಡೆಸುವಲ್ಲಿ ವೈಫಲ್ಯಕ್ಕಾಗಿ ರಾಜ್ಯ ಸರಕಾರವನ್ನು ತರಾಟೆಗೆತ್ತಿಕೊಂಡಿದ್ದಾರೆ.







