ಮೀನು ಹಿಡಿಯಲು ತೆರಳಿದ ಯುವಕ ಸಮುದ್ರಪಾಲು

ಪಡುಬಿದ್ರೆ, ಎ.9: ಮನೆಯ ಪಕ್ಕದಲ್ಲೇ ಮೀನು ಹಿಡಿಯಲು ತೆರಳಿದ್ದ ಯುವಕನೋರ್ವ ಸಮುದ್ರಪಾಲಾದ ಘಟನೆ ಪಡುಬಿದ್ರೆ ಸಮುದ್ರ ಕಿನಾರೆಯ ನಡಿಪಟ್ಣ ಎಂಬಲ್ಲಿ ರವಿವಾರ ಮಧ್ಯಾಹ್ನ ನಡೆದಿದೆ. ಪಡುಬಿದ್ರೆ ನಡಿಪಟ್ಣ ನಿವಾಸಿ ಪ್ರಜ್ವಲ್ ಶೆಟ್ಟಿ (23) ಸಮುದ್ರಪಾಲಾದ ದುರ್ದೈವಿ.
ಮಧ್ಯಾಹ್ನ ಪಕ್ಕದ ಮನೆಯ ಹುಡುಗನೊಂದಿಗೆ ಮೀನು ಹಿಡಿಯಲು ಸಮುದ್ರಕ್ಕೆ ಇಳಿದಿದ್ದ ಪ್ರಜ್ವಲ್ ಅಲೆಗಳಿಗೆ ಸಿಲುಕಿಕೊಂಡಿದ್ದಾನೆ. ಇದನ್ನು ಕಂಡ ಬೀಚ್‌ನ ಜೀವರಕ್ಷಕರು ತಕ್ಷಣ ಸ್ಥಳಕ್ಕೆ ಆಗಮಿಸಿ ಸಮುದ್ರಕ್ಕೆ ಹಾರಿ ಪ್ರಜ್ವಲ್‌ನನ್ನು ಕಾಪಾಡಲು ಹರಸಾಹಸ ಪಟ್ಟರೂ ಪ್ರಯತ್ನ ಫಲಕಾರಿಯಾಗಲಿಲ್ಲ. ಪಡುಬಿದ್ರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಹುಡುಕಾಟದಲ್ಲಿ ಸಹಕರಿಸಿದ್ದಾರೆ.
ನಡಿಪಟ್ಣ ನಿವಾಸಿಯಾಗಿರುವ ಪ್ರಜ್ವಲ್ ಶೆಟ್ಟಿಯ ಮನೆ ಸಮುದ್ರದ ಪಕ್ಕದಲ್ಲಿದೆ. ಪ್ರಜ್ವಲ್‌ನ ತಂದೆ, ತಾಯಿ ಮತ್ತು ತಂಗಿ ಕಾರ್ಯಕ್ರಮ ನಿಮಿತ್ತ ಹೊರಹೋಗಿದ್ದರಿಂದ ಆತ ತನ್ನ ಸ್ನೇಹಿತನೊಂದಿಗೆ ಮೀನು ಹಿಡಿಯಲು ತೆರಳಿದ್ದ.
ಮೊಗವೀರರರ ಸಹಕಾರ: ಸಮುದ್ರ ಪಾಲಾಗಿದ್ದ ಪ್ರಜ್ವಲ್‌ನನ್ನು ಹುಡುಕಾಡಲು ಕಾಡಿಪಟ್ಣ ಮತ್ತು ನಡಿಪಟ್ಣ ಊರಿನ ಮೀನುಗಾರರು ಸಹಕರಿಸಿದ್ದರು. ಸುಮಾರು 200ರಷ್ಟು ಮಂದಿ ಪ್ರಯತ್ನಪಟ್ಟರೂ ಪ್ರಜ್ವಲ್ ಪತ್ತೆಯಾಗಿಲ್ಲ.





