"ಪ್ರಧಾನಿಯ ನೋಟು ಅಮಾನ್ಯ ನೀತಿಯಿಂದ 4.5 ಕೋಟಿ ಕಟ್ಟಡ ಕಾರ್ಮಿಕರು ಬೀದಿಗೆ"

ದಾವಣಗೆರೆ, ಎ.9: ಪ್ರಧಾನಿ ಮೋದಿಯವರ ನೋಟು ಅಮಾನ್ಯ ನೀತಿಯಿಂದಾಗಿ ದೇಶದಲ್ಲಿ 4.5 ಕೋಟಿ ಕಟ್ಟಡ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕಾಂ.ಕೆ. ಮಹಾಂತೇಶ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ರೋಟರಿ ಬಾಲವನದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪ್ರಥಮ ದಾವಣಗೆರೆ ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಿ ಮೋದಿ ಪ್ರಕಾರ ನೋಟು ನಿಷೇಧಿಸಲು ಮೂರು ಕಾರಣಗಳಿವೆ. ಭ್ರಷ್ಟಾಚಾರ, ಕಪ್ಪುಹಣ ಹಾಗೂ ಭಯೋತ್ಪಾದನೆ. ಆದರೆ, ಇದ್ಯಾವುದೂ ನಮ್ಮಂತಹವರಿಗೆ ಸಂಬಂಧಿಸಿದ್ದಲ್ಲ. ಆದ್ದರಿಂದ ವಿನಾಕಾರಣ ನಮಗೆ ತೊಂದರೆ ನೀಡಿದಂತಾಗಿದೆ ಎಂದ ಅವರು, ಬ್ಯಾಂಕ್‌ಗಳ 3.2 ಲಕ್ಷ ಕೋಟಿ ಹಣದಲ್ಲಿ ಸುಮಾರು 15 ಲಕ್ಷ ಕೋಟಿ ಹಣವನ್ನು ಶ್ರೀಮಂತರೇ ಸಾಲ ಪಡೆದು ಬ್ಯಾಂಕ್‌ಗೆ ಪಂಗನಾಮ ಹಾಕಿದ್ದಾರೆ. ಇದರಿಂದಾಗಿ ಬ್ಯಾಂಕ್ ಖಜಾನೆ ಖಾಲಿಯಾಗಿದೆ. ಈ ಖಜಾನೆ ತುಂಬಿಸಲು ಪ್ರಧಾನಿ ಮೋದಿ ನೋಟು ನಿಷೇಧದ ತಂತ್ರ ಅನುಸರಿಸಿದ್ದಾರೆ ಎಂದು ಅವರು ದೂರಿದರು.
ಮರಳಿಗೆ ಪರ್ಯಾಯವಾಗಿ ಎಂ ಸ್ಯಾಂಡ್ ಲಭ್ಯವಿದೆ. ಆದರೆ, ಎಂ ಸ್ಯಾಂಡ್ ಬಗ್ಗೆ ಅನೇಕರಿಗೆ ಮಾಹಿತಿ ಹಾಗೂ ಗುಣಮಟ್ಟದ ಬಗ್ಗೆ ನಂಬಿಕೆ ಇಲ್ಲ. ಇದರಿಂದ ಎಂ ಸ್ಯಾಂಡ್ ಬಳಸಲು ಕಟ್ಟಡ ಕಟ್ಟಿಸುವವರು ಒಪ್ಪುತ್ತಿಲ್ಲ. ಆದ್ದರಿಂದ ಸರಕಾರವೇ ಎಂ ಸ್ಯಾಂಡ್ ಗುಣಮಟ್ಟದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದವರು ಒತ್ತಾಯಿಸಿದರು. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಒಟ್ಟು 5,400 ಕೋಟಿ ರೂ. ಸಂಗ್ರಹವಿದ್ದರೂ 10 ವರ್ಷಗಳಲ್ಲಿ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಖರ್ಚು ಮಾಡಿರುವುದು ಕೇವಲ 33 ಕೋಟಿ ಮಾತ್ರ. ಆದ್ದರಿಂದ ಕಟ್ಟಡ ಕಾರ್ಮಿಕರಿಗೆ ನಿವೃತ್ತಿ ವೇತನ ಕನಿಷ್ಠ 3 ಸಾವಿರ, ಅಪಘಾತದಲ್ಲಿ ಮೃತಪಟ್ಟರೆ 10 ಲಕ್ಷ ರೂ. ಪರಿಹಾರ, ಮನೆ ಕಟ್ಟಲು 1 ಲಕ್ಷ ರು. ನೀಡಬೇಕೆಂದು ಅವರು ಆಗ್ರಹಿಸಿದರು.
ಕಾಂ. ತಿಮ್ಮಣ್ಣ ಹೊನ್ನೂರು ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಗೌರವಾಧ್ಯಕ್ಷ ಕಾಂ. ಕೆ. ಲಕ್ಷ್ಮಿನಾರಾಯಣ ಟ್, ಸಿಐಟಿಯು ಅಧ್ಯಕ್ಷ ಶ್ರೀನಿವಾಸ್ ಮೂರ್ತಿ,. ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.
ಸಂಘಟನೆ ಸಂಚಾಲಕ ಜೆ. ಲೋಕೇಶ್ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಗುಡ್ಡಪ್ಪ ನಿರೂಪಿಸಿದರು. ಎಂ.ಡಿ. ರಫೀಕ್ ವಂದಿಸಿದರು.







