ಕಡಲ್ಗಳ್ಳರ ವಶವಿದ್ದ ವಾಣಿಜ್ಯ ನೌಕೆಯ ರಕ್ಷಣೆಗೆ ಭಾರತ, ಚೀನಾ ನೌಕಾಪಡೆಯ ಜಂಟಿ ಕಾರ್ಯಾಚರಣೆ

ಹೊಸದಿಲ್ಲಿ, ಎ.9: ಸುಸಂಘಟಿತ ಯತ್ನವೊಂದರಲ್ಲಿ ಭಾರತ ಮತ್ತು ಚೀನಾದ ನೌಕಾಪಡೆಗಳು ಗಲ್ಫ್ ಆಫ್ ಏಡನ್‌ನಲ್ಲಿ ಸೊಮಾಲಿಯನ್ ಕಡಲ್ಗಳ್ಳರಿಂದ ಅಪಹರಣಕ್ಕೀಡಾಗಿದ್ದ ವಾಣಿಜ್ಯ ನೌಕೆಯೊಂದನ್ನು ರಕ್ಷಿಸಲು ಯಶಸ್ವಿಯಾಗಿವೆ.
ತಮ್ಮ ಮೇಲೆ ಆಕ್ರಮಣ ನಡೆಯುವ ಸಾಧ್ಯತೆಯಿದೆ ಎಂದು ಸರಕು ಸಾಗಿಸುತ್ತಿದ್ದ ಒಎಸ್ 35 ನೌಕೆಯಿಂದ ಕರೆ ಬಂದಾಗ ಭಾರತದ ನೌಕಾಪಡೆಯು ತನ್ನ ಐಎನ್‌ಎಸ್ ಮುಂಬೈ ಮತ್ತು ಐಎನ್‌ಎಸ್ ತರ್ಕಷ್ ನೌಕೆಯನ್ನು ಸ್ಥಳಕ್ಕೆ ರವಾನಿಸಿದರೆ, ಇದೇ ರೀತಿಯ ಕರೆಯನ್ನು ಸ್ವೀಕರಿಸಿದ ಚೀನಾದ ನೌಕಾಪಡೆಯೂ ತನ್ನ ಕ್ಷಿಪಣಿ ಸಜ್ಜಿತ ಯೂಲಿನ್ ನೌಕೆಯನ್ನು ಸ್ಥಳಕ್ಕೆ ಕಳುಹಿಸಿತು.
ವಾಣಿಜ್ಯ ನೌಕೆಯಲ್ಲಿ ಫಿಲಿಪೈನ್ಸ್‌ನ 19 ಪ್ರಜೆಗಳಿದ್ದರು. ಮಲೇಶ್ಯಾದ ಕೆಲಾಂಗ್ ಬಂದರಿನಿಂದ ಯೆಮನ್‌ನ ಏಡನ್ ಬಂದರಿಗೆ ಸರಕು ಸಾಗಿಸುತ್ತಿದ್ದಾಗ ಸೊಮಾಲಿಯಾದ ಕಡಲ್ಗಳ್ಳರ ಆಕ್ರಮಣಕ್ಕೆ ತುತ್ತಾಗಿತ್ತು.
ಸ್ಥಳಕ್ಕೆ ಧಾವಿಸಿದ ಭಾರತದ ನೌಕೆ ಹೆಲಿಕಾಪ್ಟರ್ ಮೂಲಕ ವಾಯುಕ್ಷೇತ್ರದಲ್ಲಿ ದಾಳಿ ನಡೆಸಿದರೆ, ಚೀನಾದ ನೌಕೆ 18 ಸಿಬ್ಬಂದಿಗಳನ್ನು ನಿಯೋಜಿಸಿ ವಾಣಿಜ್ಯ ನೌಕೆಯಲ್ಲಿ ಬಂಧಿಗಳಾಗಿದ್ದ ಸಿಬ್ಬಂದಿಗಳನ್ನು ರಕ್ಷಿಸಿತು. ಕಾರ್ಯಾಚರಣೆಗೆ ಬೆಂಗಾವಲಾಗಿ ಭಾರತದ ಎರಡು ಸಮರ ನೌಕೆಗಳನ್ನು ಪ್ರದೇಶದಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು .ಭಾರತ, ಚೀನಾದ ನೌಕಾಪಡೆಗಳು ಆಗಮಿಸುತ್ತಿರುವುದನ್ನು ಕಂಡ ಕಡಲ್ಗಳ್ಳರು ಪರಾರಿಯಾಗಿದ್ದರು.
ಕಡಲ್ಗಳ್ಳರ ವಿರುದ್ಧ ಅಂತಾರಾಷ್ಟ್ರೀಯ ಕಡಲ ತಡಿಯ ಸಹಕಾರ ಕಾರ್ಯಾಚರಣೆಗೆ ಇದೊಂದು ಉದಾಹರಣೆಯಾಗಿದೆ ಎಂದು ಭಾರತದ ನೌಕಾಪಡೆಯ ವಕ್ತಾರ ಕ್ಯಾ.ಡಿ.ಕೆ.ಶರ್ಮ ತಿಳಿಸಿದ್ದಾರೆ. ಕಾರ್ಯಾಚರಣೆ ಯಶಸ್ವಿಯಾಗಿ ಮುಕ್ತಾಯಗೊಂಡ ಬಳಿಕ ಉಭಯ ದೇಶಗಳ ನೌಕಾಪಡೆಗಳು ಅಭಿನಂದನೆಯನ್ನು ವಿನಿಮಯ ಮಾಡಿಕೊಂಡವು.







