ರಿಲ್ಯಾಕ್ಸ್ ಆಗಲು "ರಾಜಕುಮಾರ"ನ ನೋಡಹೋದ ಸಿಎಂ

ಮೈಸೂರು, ಎ.9: ಹತ್ತು ದಿನಗಳಿಂದ ಉಪ ಚುನಾವಣೆ ಪ್ರಚಾರ, ಕಾರ್ಯತಂತ್ರ ರೂಪಿಸುವಲ್ಲಿ ಮಗ್ನರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಇಂದು ಸಿನಿಮಾ ನೋಡುವ ಮೂಲಕ ರಿಲ್ಯಾಕ್ಸ್ ಆದರು.
ಹತ್ತು ದಿನಗಳಿಂದ ಮೈಸೂರಿನಲ್ಲೇ ಇರುವ ಮುಖ್ಯಮಂತ್ರಿ ಬೆಂಗಳೂರಿಗೆ ಹೊರಡುವ ಮುನ್ನ ಜಯಲಕ್ಷ್ಮಿಪುರದಲ್ಲಿರುವ ಡಿಆರ್ ಸಿ ಮಲ್ಟಿಪ್ಲೆಕ್ಸ್ ಗೆ ತೆರಳಿ ಪುನೀತ್ ರಾಜ್ ಕುಮಾರ್ ಅಭಿನಯಿಸಿರುವ "ರಾಜಕುಮಾರ" ಚಿತ್ರ ವೀಕ್ಷಿಸಿದರು.
ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದ ಪುನೀತ್ ತಮ್ಮ ಚಿತ್ರ ಬಿಡುಗಡೆಯಾಗುತ್ತಿರುವ ವಿಷಯ ತಿಳಿಸಿದ್ದರು. ಚುನಾವಣಾ ಪ್ರಚಾರ ಕಾರ್ಯದಲ್ಲೇ ಮಗ್ನರಾಗಿದ್ದ ಸಿದ್ದರಾಮಯ್ಯ ಇಂದು ಬಿಡುವು ಮಾಡಿಕೊಂಡು ಸಿನೆಮಾ ವೀಕ್ಷಿಸಿದರು.
ಪುನೀತ್ ನಟನೆಗೆ ಸಿಎಂ ಫುಲ್ ಫಿದಾ: ಸಿನೆಮಾ ಮುಗಿದ ನಂತರ ಪುನೀತ್ ಜೊತೆಗೆ ದೂರವಾಣಿ ಮೂಲಕ ಮಾತನಾಡಿದ ಸಿಎಂ ಪುನೀತ್ ನಟನೆಯನ್ನು ಹಾಡಿ ಹೊಗಳಿದರು. "ನಾನು ಕೂಡ ಡಾ.ರಾಜ್ ಕುಮಾರ್ ಅಭಿಮಾನಿ. ಮತ್ತೆ ಬೆಳ್ಳಿತೆರೆಯ ಮೇಲೆ ನಟಸಾರ್ವಭೌಮನನ್ನೇ ನೋಡಿದ ಹಾಗಾಯ್ತು" ಎಂಬ ಮೆಚ್ಚುಗೆಯ ಮಾತುಗಳನ್ನಾಡಿದರು.
ಡಾ.ರಾಜ್ ಅವರನ್ನು ಭೇಟಿಯಾದಾಗ ಅವರು "ನಮ್ಮ ಕಾಡಿನವರು ಬಂದರು" ಎಂದು ಹೇಳುತ್ತಿದ್ದುದನ್ನು ಮುಖ್ಯಮಂತ್ರಿ ಇದೇ ವೇಳೆ ಸ್ಮರಿಸಿಕೊಂಡರು.







