ತಂಟೆಕೋರ ಯಾತ್ರಿಕರ ಪಟ್ಟಿಯನ್ನು ಕೇಂದ್ರ ಸರಕಾರ ತಯಾರಿಸುತ್ತಿದೆ!
ಹೊಸದಿಲ್ಲಿ, ಎ.9: ವಿಮಾನಗಳಲ್ಲಿ ತೊಂದರೆಯುಂಟು ಮಾಡುವ ಪ್ರಯಾಣಿಕರ ಪಟ್ಟಿಯನ್ನು ಕೇಂದ್ರ ಸರಕಾರ ತಯಾರಿಸಲು ಹೊರಟಿದೆ. ವಿಮಾನಯಾನ ಸಹ ಸಚಿವ ಜಯಂತ್ ಸಿನ್ಹ ಈ ವಿಷಯವನ್ನು ತಿಳಿಸಿದ್ದಾರೆ.ಶಿವಸೇನೆ ಸಂಸದ ರವೀಂದ್ರ ಗಾಯಕ್‌ವಾಡ್ ಪ್ರಕರಣದ ಬಳಿಕ ಕೇಂದ್ರ ಸರಕಾರಕ್ಕೆ ಇಂತಹದೊಂದು ಜ್ಞಾನೋದಯವಾಗಿದೆ. ಗಾಯಕ್‌ವಾಡ್ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ಸಚಿವರು ಹೇಳಿದರು. ವಿಮಾನದ ಪ್ರಯಾಣಿಕರು ಮತ್ತು ನೌಕರರ ಸುರಕ್ಷೆ ಮುಖ್ಯವಾಗಿದೆ. ವಿಮಾನ ನೌಕರರೊಡನೆ ಕ್ಷಮೆ ಯಾಚಿಸದೆ ಗಾಯಕ್‌ವಾಡ್‌ರ ನಿಷೇಧವನ್ನು ತೆರವುಗೊಳಿಸಿದ್ದರ ಬಗ್ಗೆ ಸಚಿವರು ಸ್ಪಷ್ಟೀಕರಣ ನೀಡಿದರು. ಓರ್ವ ಪ್ರಯಾಣಿಕನಿಗೆ ವಿಮಾನದಲ್ಲಿ ಪ್ರಯಾಣಿಸದಂತೆ ನಿಷೇಧ ಹೇರುವುದು ಅಂತಹ ಒಂದು ಘಟನೆ ಭವಿಷ್ಯದಲ್ಲೆಂದೂ ನಡೆಯಬಾರದು ಎನ್ನುವ ಉದ್ದೇಶದಿಂದಾಗಿದೆ. ಗಾಯಕ್‌ವಾಡ್‌ರ ವಿಷಯದಲ್ಲಿ ಭವಿಷ್ಯದಲ್ಲಿ ಅಂತಹ ಘಟನೆ ನಡೆಯಲಾರದು ಎನ್ನುವ ವಿಚಾರವನ್ನು ಮಾತ್ರ ಪರಿಗಣಿಸಲಾಗಿದೆ ಎಂದು ಸಚಿವರು ಹೇಳಿದರು. ಶುಕ್ರವಾರ ಏರ್‌ಇಂಡಿಯ ಎರಡು ವಾರಗಳಿಂದ ಗಾಯಕ್‌ವಾಡ್‌ಗೆ ಹೇರಿದ್ದ ನಿಷೇಧವನ್ನು ತೆರವುಗೊಳಿಸಿದೆ. ಗಾಯಕ್‌ವಾಡ್ ವಿರುದ್ಧ ನಿಷೇಧವನ್ನು ಗೃಹ ಸಚಿವ ರಾಜನಾಥ್ ಸಿಂಗ್ ಮುಂತಾದವರು ಮನವಿ ಹಿನ್ನೆಲೆಯಲ್ಲಿ ಏರ್ ಇಂಡಿಯ ತೆರವುಗೊಳಿಸಿತ್ತು.





