ಮಲೆಯಾಳಂ ಕಲಿಸದಿದ್ದರೆ ಶಾಲೆಗಳ ಅನುಮತಿ ರದ್ದು: ಕೇರಳ ಸರಕಾರ
ತಿರುವನಂತಪುರಂ, ಎ.9: ಮಲೆಯಾಳಂ ಭಾಷೆಯನ್ನು ಕಲಿಸದ ಶಾಲೆಗಳ ಅನುಮತಿಯನ್ನು ರದ್ದುಪಡಿಸುವುದಕ್ಕಾಗಿ ಕೇರಳ ಸರಕಾರ ಸೂಕ್ತ ನಿಯಮ ರೂಪಿಸುತ್ತಿದೆ. ಹತ್ತನೆ ತರಗತಿವರೆಗೆ ಮಲೆಯಾಳಂ ಭಾಷೆಯನ್ನು ಕಡ್ಡಾಯವಾಗಿ ಕಲಿಸಬೇಕು. ಇಲ್ಲದಿದ್ದರೆ ಅನುಮತಿಯನ್ನು ಕಳಕೊಳ್ಳಬೇಕು. ಇದಕ್ಕೆ ಸಂಬಂಧಿಸಿದ ಆರ್ಡಿಯನ್ಸ್ (ಅಧ್ಯಾದೇಶ) ಸಿದ್ಧಪಡಿಸಲಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಇದು ಚರ್ಚೆಗೆ ಬರಲಿದೆ. ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳ ಅಫಿಲಿಯೇಶನ್ ಆಯಾ ಮಂಡಳಿ ಗಳಿಗೆ ಹೊಂದಿಕೊಂಡು ಇದೆ. ಆದ್ದರಿಂದ ಅಂತಹ ಶಾಲೆಗಳಿಗೆ ನೀಡುವ ನೋ ಅಬ್ಜೆಕ್ಷನ್ ಸರ್ಟಿಫಿಕೆಟ್‌ಗಳನ್ನು ಸರಕಾರ ಹಿಂದಕ್ಕೆ ಪಡೆಯಲಿದೆ. 12ನೆ ತರಗತಿವರೆಗೆ ಮಲೆಯಾಳಂ ಭಾಷೆಯನ್ನು ಕಡ್ಡಾಯಗೊಳಿಸಬೇಕೆನ್ನುವ ವಿಷಯದಲ್ಲಿ ಸಚಿವ ಸಂಪುಟ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಮುಂದಿನ ಅಧ್ಯಯನ ವರ್ಷದಿಂದ ಮಲೆಯಾಳಂ ಕಲಿಕೆ ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ. ಸರಕಾರಿ, ಎಯ್ಡೆಡ್, ಸಿಬಿಎಸ್‌ಇ, ಐಸಿಎಸ್‌ಇ, ಖಾಸಗಿ ಸ್ಕೂಲ್‌ಗಳಿಗೆ ಕಾನೂನು ಅನ್ವಯವಾಗಲಿದೆ. ಗಡಿಪ್ರದೇಶದ ಶಾಲೆಗಳಿಗೂ ಇದು ಅನ್ವಯವಾಗಿದೆ. ಮಲೆಯಾಳಂ ಪರೀಕ್ಷೆ ಇರುತ್ತದೆ. ಶಾಲೆಗಳಲ್ಲಿ ಮಕ್ಕಳು ಮಲೆಯಾಳಂ ಭಾಷೆ ಮಾತನಾಡದಂತೆ ತಡೆಯುವುದು ಕಾನೂನು ಬಾಹಿರವಾಗಿದೆ. ಅಂತಹ ಸ್ಕೂಲ್‌ಗಳಿಗೆ 500 ರೂ. ದಂಡ ವಿಧಿಸಲಾಗುವುದು. ಮೂರು ಸಲ ಈ ರೀತಿ ಆದರೆ ಶಾಲೆಗಳ ಎನ್‌ಒಸಿ ಹಿಂಪಡೆಯಲಾಗುವುದು. ರಾಜ್ಯದಲ್ಲಿ ನೋಂದಣಿಯಾದ ಸ್ಕೂಲ್‌ಗಳ ಅನುಮತಿ ರದ್ದುಪಡಿಸಲಾಗುವುದು.