ಆಯುರ್ವೇದ ವೈದ್ಯ ನಿಧನ

ಉಡುಪಿ, ಎ.9: ಆಯುರ್ವೇದ ಚಿಕಿತ್ಸಕ, ಸೇವಾದೃಷ್ಟಿಯ ವೈದ್ಯ ಅಂಬಲ ಪಾಡಿಯ ಡಾ.ಕಿದಿಯೂರು ಗುರುರಾಜ ಭಾಗವತ್ ಹೃದಯಾಘಾತದಿಂದ ಎ.8ರಂದು ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ, ನಾಲ್ವರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ. ಪರಂಪರಾಗತ ಆಯುರ್ವೇದ ಚಿಕಿತ್ಸಕರ ಕುಟುಂಬದಿಂದ ಬಂದ ಗುರುರಾಜ ಭಾಗವತರು ಪೂರ್ವಿಕರ ಚಿಕಿತ್ಸಾ ಪರಂಪರೆಯ ರೋಗ ನಿದಾನಕ್ರಮವನ್ನು ಕಲಿತು ಹೊಸ ಚಿಕಿತ್ಸಾ ಪ್ರಯೋಗಗಳನ್ನು ನಡೆಸಿ ಯಶಸ್ವಿಯಾದರು. ಜಿಲ್ಲೆ, ರಾಜ್ಯ, ಮುಂಬಯಿ, ಕೇರಳ, ಚೆನ್ನೈ, ಅಮೆರಿಕ, ಆಸ್ಟ್ರೇಲಿಯ, ಸಿಂಗಾಪುರ ಮೊದಲಾದ ರಾಷ್ಟ್ರಗಳಿಂದ ಬಂದ ರೋಗಿಗಳಿಗೂ ಚಿಕಿತ್ಸೆ ನೀಡಿದ್ದರು.
ಕಣ್ಣು, ಸಂತಾನ ಮಾತ್ರವಲ್ಲದೆ ಸಂಧಿಶೂಲ, ಟೈಫಾಯ್ಡ್, ಕ್ಯಾನ್ಸರ್, ಮನೋದೈಹಿಕ ಕಾಯಿಲೆಗಳಿಗೂ ಚಿಕಿತ್ಸೆ ನೀಡುತ್ತಿದ್ದರು. ಇವರು ಆಯುರ್ವೇದ ‘ದ್ರವ್ಯಗುಣ ಸಾರಸಂಗ್ರಹ’, ‘ಸ್ತ್ರೀ ಪುರುಷ ಸ್ವಾಸ್ಥ ಚಿಂತನ’ ಕೃತಿಗಳನ್ನು ರಚಿಸಿದ್ದರು. ಇವರಿಗೆ ಆಯುರ್ವೇದ ಚಿಕಿತ್ಸಾ ಪರಿಷತ್, ಸಾರಸ್ವತ ಮಹಾವಿದ್ಯಾ ಲಯ ಮೊದಲಾದ ಸಂಘ-ಸಂಸ್ಥೆಗಳು "ಧನ್ವಂತರಿ ಪುರಸ್ಕಾರ", "ನೇತ್ರ ಚಿಕಿತ್ಸಾ ದುರಂಧರ", "ಸದ್ವೈದ್ಯ ಭೂಷಣ", "ನೇತ್ರ ದೀಪಿಕಾ", "ಆಯುರ್ವೇದ ಭಾಸ್ಕರ" ಮೊದಲಾದ ಪ್ರಶಸ್ತಿ ನೀಡಿವೆ.







