ಹಕ್ಕಿಪಿಕ್ಕಿ ಕ್ಯಾಂಪ್‌ನ ನಿರ್ವಸಿತರಿಗೆ ಹಕ್ಕುಪತ್ರ ನೀಡಲು ಕಾಗೋಡು ತಿಮ್ಮಪ್ಪ ಸೂಚನೆ
.jpg)
ಶಿವಮೊಗ್ಗ, ಎ.9: ಶಿವಮೊಗ್ಗ ಸಮೀಪದ ಹಕ್ಕಿಪಿಕ್ಕಿ ಕ್ಯಾಂಪ್‌ನ ನಿರ್ವಸಿತರಿಗೆ ಯಾವುದೇ ಸಬೂಬು ಹೇಳದೆ ಕೂಡಲೇ ಹಕ್ಕುಪತ್ರ ಮಂಜೂರಾತಿ ಆದೇಶ ಪತ್ರ ನೀಡುವಂತೆ ರಾಜ್ಯ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇತ್ತೀಚೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಬರ ಪರಿಹಾರ, 94ಎ, ಬಿ,ಸಿ, ಮತ್ತು ಸಿಸಿ ಕಾಯ್ದೆಯಡಿ ಅರ್ಜಿಗಳ ವಿಲೇವಾರಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ತಾಪಮಾನ ಹೆಚ್ಚಳವಾಗಲಿರುವ ಹಿನ್ನೆಲೆ ಹಾಗೂ ಕೆರೆ-ಕಟ್ಟೆ-ಕಾಲುವೆಗಳಲ್ಲಿ ನೀರಿನ ಸಂಗ್ರಹ ಕನಿಷ್ಟ ಮಟ್ಟ ತಲುಪಿರುವ ಕಾರಣ ಸಂಬಂಧಿಸಿದ ಅಧಿಕಾರಿಗಳು ಕುಡಿಯುವ ನೀರು ಸರಬರಾಜಿನಲ್ಲಿ ಯಾವುದೇ ಸಮಸ್ಯೆಗಳು ತಲೆದೋರದಂತೆ ಸಕಾಲಿಕ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಸಲು ಇರುವ ವಿವಿಧ ಯೋಜನೆಗಳಡಿಯಲ್ಲಿ ಮಂಜೂರಾಗಿರುವ ಅನುದಾನದಲ್ಲಿ ಕುಡಿಯುವ ನೀರಿನ ಸ್ಥಾವರಗಳ ನಿರ್ಮಾಣ, ಕೊಳವೆಬಾವಿ, ವಿದ್ಯುತ್ ಸಂಪರ್ಕ ಇತ್ಯಾದಿ ಕಾರ್ಯಗಳಿಗಾಗಿ ಬಳಸಲಾಗುತ್ತಿದೆ. ಅಲ್ಲದೇ ತುರ್ತು ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಖಾಸಗಿ ಬೋರ್‌ವೆಲ್‌ಗಳ ಮಾಲಕರೊಂದಿಗೆ ಒಡಬಂಡಿಕೆ ಮಾಡಿಕೊಂಡು ನೀರನ್ನು ಒದಗಿಸಲಾಗುತ್ತಿದೆ. ಅಲ್ಲದೇ ತುರ್ತು ಅಗತ್ಯಗಳಿಗಾಗಿ ಟ್ಯಾಂಕರ್‌ಗಳ ಮೂಲಕ ನೀರನ್ನು ಪೂರೈಸಲಾಗುತ್ತಿದೆ ಎಂದವರು ನುಡಿದರು.
ಕುಡಿಯುವ ನೀರು ಒದಗಿಸುವಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಹಶೀಲ್ದಾರರು ಸಮನ್ವಯತೆ ಸಾಧಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳಲು ಸದಾ ಜಾಗೃತರಾಗಿರುವಂತೆ ಸೂಚಿಸಿದ ಸಚಿವರು, ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಪಶು ಇಲಾಖೆ ಅಧಿಕಾರಿಗಳು ಗಮನಹರಿಸಬೇಕು. ಈಗಾಗಲೇ ಸಂಗ್ರಹಿಸಲಾಗಿರುವ 278 ಮೆಟ್ರಿಕ್ ಟನ್ ಮೇವನ್ನು ಅಗತ್ಯವಿರುವ ಜಿಲ್ಲೆಗಳಿಗೆ ಪೂರೈಸಲು ಕ್ರಮಕೈಗೊಳ್ಳುವಂತೆ ಸೂಚಿಸಿದರು. ಅಗತ್ಯವಿದ್ದಲ್ಲಿ ನೆರೆ ರಾಜ್ಯಗಳಿಂದ ಮೇವನ್ನು ತರಿಸಿಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ರವಿಕುಮಾರ್, ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಶೇ.100ರಷ್ಟು ಪ್ರಗತಿ ಸಾಧಿಸಲಾಗಿರುವುದನ್ನು ಸಚಿವರ ಗಮನಕ್ಕೆ ತಂದರು.
94ಎ, ಬಿ, ಸಿ ಮತ್ತು ಸಿಸಿ ಕಾಯ್ದೆಯಡಿ ಆಗಿರುವ ಪ್ರಗತಿ ಹಾಗೂ ಬರ, ಕುಡಿಯುವ ನೀರು ಮುಂತಾದವುಗಳ ಪ್ರಗತಿಯನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಕಂದಾಯ ಇಲಾಖೆ ಎಲ್ಲಾ ಇಲಾಖೆಗಳ ಮಾತೃ ಇದ್ದಂತೆ. ತಾಲೂಕು ಕಚೇರಿಗಳಲ್ಲಿ ಆಡಳಿತ ವ್ಯವಸ್ಥೆ ಇನ್ನಷ್ಟು ಸುಧಾರಿಸಬೇಕು. ಕಡತ ವಿಲೇವಾರಿಗೆ ಅಧಿಕಾರಿಗಳು ಗಮನಹರಿಸಬೇಕೆಂದವರು ನುಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ತೋಟಗಾರಿಕೆ ಬೆಳೆ ನಷ್ಟದ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ.ವಿಶ್ವನಾಥ ಸಚಿವರ ಗಮನ ಸೆಳೆದರು. ಈ ಸಂದರ್ಭದಲ್ಲಿ ಸಚಿವರು ಮಾತನಾಡಿ, ರೈತರಿಗೆ ಹನಿ ನೀರಾವರಿ ಬಗ್ಗೆ, ಕಡಿಮೆ ನೀರನ್ನು ಬಳಸಿ, ಉತ್ತಮ ಇಳುವರಿ ಪಡೆಯುವ ಬಗ್ಗೆ, ನೀರಿನ ಮಹತ್ವದ ಬಗ್ಗೆ ರೈತರಿಗೆ ಮಾಹಿತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ವಿಶ್ವನಾಥ ಅವರಿಗೆ ಸೂಚಿಸಿದರು.
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳಕ್ಕೆ ಯತ್ನಿಸಬೇಕು. ವಸತಿ ನಿಲಯಗಳಲ್ಲಿ ಮಕ್ಕಳ ಗೈರು ಹಾಜರಿ ಬಗ್ಗೆ ಗಮನಹರಿಸಬೇಕು. ಸ್ವಯಂ ಉದ್ಯೋಗ ಕೈಗೊಳ್ಳಬಯಸುವ ನಿರುದ್ಯೋಗಿಗಳಿಗೆ ಸ್ವಯಂ ಸನಿವಾಸ ಉದ್ಯೋಗ ತರಬೇತಿ ಕಾರ್ಯಾಗಾರಗಳನ್ನು ಏರ್ಪಡಿಸಬೇಕು. ಪ್ರತಿ ಪಂಚಾಯಿತಿಗೆ ಕನಿಷ್ಟ 5 ಎಕರೆ ಪ್ರದೇಶದಲ್ಲಿ ಹಣ್ಣಿನ ಗಿಡ ಸೇರಿದಂತೆ ಸಾಮಾಜಿಕ ಅರಣ್ಯ ನಿರ್ಮಾಣಕ್ಕೆ ಮುಂದಾಗಬೇಕು. ಮಾರುಕಟ್ಟೆಯಲ್ಲಿ ಬಹುಬೇಡಿಕೆಯಲ್ಲಿರುವ ಕಾಟ್ಲಾ ಜಾತಿಯ ಮೀನುಗಳು ದೊರೆಯದಾಗಿದೆ. ಈ ಜಾತಿಯ ಮೀನುಕೃಷಿಗೆ ಮುಂದಾಗಬೇಕು. ಸಾಗರ ತಾಲೂಕಿನ ತಲಕಳಲೆಯಲ್ಲಿ ಮೀನುಮರಿ ಸಾಕಾಣಿಕೆ ಕೇಂದ್ರ ಆರಂಭಿಸಲು ಮೀನುಗಾರಿಕೆ ಇಲಾಖಾಧಿಕಾರಿಗಳು ಗಮನಹರಿಸುವಂತೆ ಅವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ, ಹೆಚ್.ಆರ್.ರಾಜಪ್ಪ, ಮಹಾನಗರಪಾಲಿಕೆ ಆಯುಕ್ತೆ ಶ್ರೀಮತಿ ತುಷಾರಮಣಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.







