Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಕಪ್ಪು ಜನ, ಅಂಬೇಡ್ಕರ್ ಮತ್ತು ಅಘೋಷಿತ...

ಕಪ್ಪು ಜನ, ಅಂಬೇಡ್ಕರ್ ಮತ್ತು ಅಘೋಷಿತ ಮೀಸಲಾತಿ

ಸನತ್ ಕುಮಾರ್ ಬೆಳಗಲಿಸನತ್ ಕುಮಾರ್ ಬೆಳಗಲಿ10 April 2017 12:23 AM IST
share
ಕಪ್ಪು  ಜನ, ಅಂಬೇಡ್ಕರ್ ಮತ್ತು ಅಘೋಷಿತ ಮೀಸಲಾತಿ

ಬಾಯಾರಿಕೆಯಿಂದ ಬಸವಳಿದು ಆಯಾಸಗೊಂಡ ತಳ ಸಮುದಾಯದ ಅಮಾಯಕ ಮಕ್ಕಳು ಬೊಗಸೆಯಷ್ಟು ನೀರು ಕುಡಿಯಲು ದೇಗುಲದೊಳಗೆ ಪ್ರವೇಶಿಸಿದ್ದೇ ತಡ, ಭಾರೀ ಅನಾಚಾರವೇ ನಡೆದು ಹೋಯಿತು ಎಂಬ ಪರಿಸ್ಥಿತಿ ನಿರ್ಮಾಣ. ದೇಗುಲದಲ್ಲಿನ ಪರಮಪವಿತ್ರ ನೀರನ್ನು ಕುಡಿಯಲು ಪ್ರಯತ್ನಿಸಿದ್ದೂ ಅಲ್ಲದೆ ಪರಿಶುದ್ಧ ಸ್ಥಳ ಮಲಿನವಾಯಿತು ಎಂಬ ಗುರುತರ ಆರೋಪ. ದೇವರೇ ತಮ್ಮೆದುರು ಪ್ರತ್ಯಕ್ಷಗೊಂಡು ತೀರ್ಪು ನೀಡಿದಂತೆ ವರ್ತಿಸುವ ಕೆಲವರು ಆ ಮಕ್ಕಳನ್ನು ಕಂಬಕ್ಕೆ ಕಟ್ಟಿ ಹಾಕಿ ತದಕುವುದೂ ಅಲ್ಲದೆ ಅಮಾನುಷವಾಗಿ ತಲೆಗೂದಲನ್ನು ಕತ್ತರಿಸುತ್ತಾರೆ. ದೇವರು, ದೇಗುಲ ಕುರಿತು ಸಮಗ್ರ ಕಲ್ಪನೆ ಹೊಂದಿರದ ಆ ಮುಗ್ಧ ಮಕ್ಕಳು ನೀರು ಕುಡಿದಿದ್ದೇ ಮಹಾ ಅಪರಾಧ. ದೈಹಿಕ ಮತ್ತು ಮಾನಸಿಕ ಹಿಂಸೆಗೆ ತುತ್ತಾದ ಬಳಿಕ ಮಕ್ಕಳ ಪರಿಸ್ಥಿತಿ ಇನ್ನೂ ಗಂಭೀರ. ಮನೆಯಲ್ಲೇ ನೀರು ಕುಡಿದರೂ ಯಾರಾದರೂ ಹೊಡೆದುಬಿಡುವರು ಎಂಬ ಭೀತಿ.

ದೇಶದಲ್ಲಿ ದಲಿತರ ಸ್ಥಿತಿಗತಿ ಹೇಗಿದೆ ಮತ್ತು ಮೇಲ್ವರ್ಗದವರು ದಲಿತರ ಮೇಲೆ ಹೊಂದಿರುವ ಧೋರಣೆ ಎಂಥದ್ದು ಎಂಬುದಕ್ಕೆ ಈ ಮಕ್ಕಳ ಉದಾಹರಣೆ ಸಾಕು. ದೇಶದ ಯಾವುದೇ ಮೂಲೆಗೆ ಹೋದರೂ ಅಥವಾ ಸ್ಥಳೀಯ ಪತ್ರಿಕೆಗಳನ್ನು ಓದಿದರೂ ಇಂಥ ಒಂದೇ ಒಂದು ಸುದ್ದಿ ಅಥವಾ ಚಿತ್ರ ಕಾಣದೇ ಇರುವುದಿಲ್ಲ. ಮಕ್ಕಳು ಒಂದು ರೀತಿಯ ಕಿರುಕುಳ ಅನುಭವಿಸಿದರೆ, ಮಹಿಳೆಯರು ಅಮಾನುಷವಾಗಿ ಅತ್ಯಾಚಾರಕ್ಕೆ ಒಳಗಾಗಿ ಅಸಹನೀಯ ಹಿಂಸೆಗೆ ತುತ್ತಾಗುತ್ತಾರೆ. ಪುರುಷರ ಮೇಲೆ ಒಂದಿಲ್ಲೊಂದು ಸ್ವರೂಪದಲ್ಲಿ ದೌರ್ಜನ್ಯ ನಡೆಯುತ್ತಲೇ ಇರುತ್ತದೆ. ದೇಶವು ಸ್ವತಂತ್ರಗೊಂಡು 70 ವರ್ಷಗಳಾಗಿ, ಸರ್ವರಿಗೂ ಸಮಾನತೆ ಬೋಧಿಸುವ ಸಂವಿಧಾನದಡಿ ಬದುಕು ಕಂಡುಕೊಂಡರೂ ದಲಿತರ ಮೇಲೆ ನಡೆಯುವ ಶೋಷಣೆ ಇನ್ನೂ ಕೊನೆಗೊಂಡಿಲ್ಲ. ಇಂಥ ಪರಿಸ್ಥಿತಿಗೆ ಕಾರಣಗಳು ಹಲವು ಇರಬಹುದು. ಆದರೆ ಬೇಗನೇ ಎಚ್ಚೆತ್ತುಕೊಂಡು ಶೋಷಣೆ, ದೌರ್ಜನ್ಯ ಮತ್ತು ಹಿಂಸೆಯ ವಿರುದ್ಧ ದನಿಯೆತ್ತದಿದ್ದರೆ ಪರಿಸ್ಥಿತಿ ಕೈ ಮೀರಬಹುದು. ಅಂಥ ಕಾಲಘಟ್ಟದಲ್ಲಿ ನಾವಿದ್ದೇವೆ.

ಶತಮಾನಗಳಿಂದ ದೀನ ದಲಿತರು ಅನುಭವಿಸಿದ ನೋವು, ಯಾತನೆಯನ್ನು ಅರಿತ ಅಂಬೇಡ್ಕರ್ ಸ್ವತಃ ಹಲವು ರೀತಿಯ ಮಾನಸಿಕ, ದೈಹಿಕ ಸಂಕಷ್ಟ ಅನುಭವಿಸಿದರು. ಇದೇ ಪರಿಸ್ಥಿತಿ ಮುಂದುವರಿದರೆ ದೇಶದಲ್ಲಿ ನೆಮ್ಮದಿಯಿಂದ ಉಸಿರಾಡುವುದು ಕಷ್ಟವಾಗುವುದೆಂದು ದಲಿತರಿಗೆ ಮೀಸಲಾತಿ ಮತ್ತು ಇನ್ನಿತರ ಸೌಲಭ್ಯ ನೀಡಲು ಮುಂದಾದರು. ಇದಕ್ಕೆ ಬೇರೆ ಬೇರೆ ಸ್ವರೂಪದಲ್ಲಿ ವಿರೋಧ ವ್ಯಕ್ತವಾದರೂ ಅಂಬೇಡ್ಕರ್ ಧೃತಿಗೆಡಲಿಲ್ಲ. ದನಿಯಿಲ್ಲದವರಿಗೆ ದನಿಯಾಗುವುದರ ಜೊತೆಗೆ ಸ್ವಾಭಿಮಾನ ಮತ್ತು ಸ್ವಾವಲಂಬನೆಯಿಂದ ಬದುಕುವ ಪಾಠ ಕಲಿಸಿಕೊಟ್ಟರು. ನೂರಾರು ವರ್ಷಗಳಿಂದ ಸಂಕಷ್ಟ ಅನುಭವಿಸಿದ್ದು ಸಾಕು ಈಗಲಾದರೂ ಕೊಂಚ ನೆಮ್ಮದಿ ಸಿಗಲಿ ಎಂಬುದು ಅಂಬೇಡ್ಕರ್ ಅವರ ಸದಾಶಯವಾಗಿತ್ತು. ಅವರ ಈ ಆಶಯವೇ ಕೆಲವರಿಗೆ ನುಂಗಲಾರದ ತುತ್ತಾಗಿದೆ. ಯಾರು ಎಲ್ಲಿ ಇರಬೇಕಾದವರು ಅಲ್ಲಿಯೇ ಇರುವುದು ಬಿಟ್ಟು ಉಳಿದಿದ್ದೆಲ್ಲವೂ ಮಾಡುತ್ತಿದ್ದಾರೆ ಎಂಬ ವಿಕೃತ ಮನಸ್ಥಿತಿ ಕೆಲವರಲ್ಲಿ ಈಗಾಗಲೇ ರೂಪಿತಗೊಂಡಿದೆ. ಅಂಥವರಿಗೆ ಸಂವಿಧಾನದ ಮೇಲೆಯೇ ಕೆಂಗಣ್ಣು.

ಎಲ್ಲಾ ಜಾತಿ, ಧರ್ಮದವರು ವಾಸವಿರುವ ಈ ದೇಶ ದಲ್ಲಿ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ. ದೇಶಕ್ಕೆ ಅಥವಾ ಪ್ರಮುಖ ವಿಷಯಕ್ಕೆ ಸಂಬಂಧಿಸಿದಂತೆ ಅವರ ಪಾತ್ರ ನಿರ್ಣಾಯಕ. ಎಷ್ಟೇ ಮರೆಮಾಚಲು ಯತ್ನಿಸಿದರೂ ಇದು ಸತ್ಯ. ಇದನ್ನು ಅರಿತುಕೊಂಡೇ ಪ್ರಧಾನಿ ನರೇಂದ್ರ ಮೋದಿ ಸರಕಾರ ಒಂದೆಡೆ ಅಂಬೇಡ್ಕರ್ ಅವರ ಭಾವಚಿತ್ರ ಮುಂದಿಟ್ಟುಕೊಂಡು ಓಲೈಸುತ್ತಿದ್ದರೆ, ಮತ್ತೊಂದೆಡೆ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಹಂತಹಂತವಾಗಿ ಸರ್ವನಾಶ ಪಡಿಸುವ ಹುನ್ನಾರ ನಡೆಸಿದೆ. ಸಂವಿಧಾನದಲ್ಲಿ ಅಡಕವಾಗಿರುವ ಮೀಸಲಾತಿ ಮತ್ತು ಇನ್ನಿತರ ಸೌಲಭ್ಯಗಳನ್ನು ತೆಗೆದು ಹಾಕಿ, ಮನುವಾದ ಆಧಾರಿತ ವಿಷಯಗಳನ್ನು ತುರುಕಿ ಹಿಂದೂರಾಷ್ಟ್ರ ನಿರ್ಮಿಸಲು ತುದಿಗಾಲಲ್ಲಿ ನಿಂತಿದೆ.

ಸಂವಿಧಾನದ ಪರಿವಿಡಿಯಲ್ಲಿ ಇರುವ ಜಾತ್ಯತೀತ ಪದ ಅವರ ಕಣ್ಣುಗಳಿಗೆ ಕುಕ್ಕುತ್ತಿದ್ದು, ಕೆಲ ತಿಂಗಳುಗಳ ಹಿಂದೆ ಅದನ್ನು ಅಳಿಸಿ ಹಾಕುವ ಹುನ್ನಾರ ನಡೆಯಿತು. ಆದರೆ ಸಫಲವಾಗಲಿಲ್ಲ.

ಪ್ರಧಾನಿ ನರೇಂದ್ರ ಮೋದಿ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದಾಗ, ಮೀಸಲಾತಿ ಸಹ ರದ್ದುಪಡಿಸಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಮೀಸಲಾತಿ ರದ್ದತಿಯಿಂದಲೇ ದೇಶದ ಅಭಿವೃದ್ಧಿ ಎಂಬ ಘೋಷ ವಾಕ್ಯ ನೀಡುವ ಪ್ರಯತ್ನವೂ ನಡೆಯಿತು. ವಿಚಿತ್ರವೆಂದರೆ, ಸಂವಿಧಾನ ನೀಡಿರುವ ಮೀಸಲಾತಿ ರದ್ದುಗೊಳಿಸುವಂತೆ ಆಗ್ರಹಿಸಿದವರು ಸಾವಿರಾರು ವರ್ಷಗಳಿಂದ ಇರುವ ಅಘೋಷಿತ ಮೀಸಲಾತಿ ಬಗ್ಗೆ ಮಾತನಾಡಲಿಲ್ಲ. ಯಾರೂ ನೇರವಾಗಿ ಬರೆಯದಿದ್ದರೂ ಅಥವಾ ಕಾನೂನು ಇರದಿದ್ದರೂ ದಲಿತರು ಅಘೋಷಿತ ಮೀಸಲಾತಿಯಡಿ ಕೆಲಸ ಮಾಡಿದ್ದು ಯಾರೂ ನೆನಪಿಸಿಕೊಳ್ಳಲಿಲ್ಲ. ಉಗುಳು ನೆಲದ ಮೇಲೆ ಬೀಳದಂತೆ ಕೊರಳಿಗೆ ಮಡಿಕೆ, ಪಾದದ ಗುರುತುಗಳು ರಸ್ತೆ ಮೇಲೆ ಮೂಡದಂತೆ ಬೆನ್ನ ಹಿಂದೆ ಕಸಬರಿಗೆ ಇಟ್ಟುಕೊಳ್ಳಬೇಕಿತ್ತು. ಕಸ, ಮುಸುರೆ ಮತ್ತು ಗಲೀಜು ಬಳಿದು ಶುಚಿಗೊಳಿಸಿಬೇಕಾದವರು ಆ ದಲಿತ ಸಮುದಾಯದವರೇ. ಅಸ್ಪಶ್ಯರಾದ ಅವರನ್ನು ಮುಟ್ಟಿದರೆ ಮೈಲಿಗೆ ಎಂಬ ಸ್ಥಿತಿ. ಈ ಎಲ್ಲಾ ಕೆಲಸಗಳನ್ನು ತಳವರ್ಗದವರೇ ಮಾಡಿದರೇ ಹೊರತು ಮೇಲ್ವರ್ಗದವರಲ್ಲ.

ಈಗಲೂ ಪೌರಕಾರ್ಮಿಕರಾಗಿ ದುಡಿಯುತ್ತಿರುವುದು ದಲಿತರು ಮತ್ತು ತುಳಿತಕ್ಕೊಳಗಾದವರು. ಯಾವುದೇ ಸುರಕ್ಷತಾ ಸೌಲಭ್ಯಗಳಿಲ್ಲದೇ ತಿಪ್ಪೆಗುಂಡಿಗಳಲ್ಲಿ ಓಡಾಡಿ ತ್ಯಾಜ್ಯ ವಿಲೇವಾರಿ ಮಾಡುತ್ತ ಅನಾರೋಗ್ಯಕ್ಕೀಡಾಗುತ್ತಾರೆ. ಒಳಚರಂಡಿ ಕೆಲಸಕ್ಕೆಂದು ಗುಂಡಿಯೊಳಗೆ ಇಳಿದು ಪ್ರಾಣ ಕಳೆದುಕೊಳ್ಳುತ್ತಾರೆ. ಬಹುತೇಕ ಮಂದಿ ಅನಕ್ಷರಸ್ಥರಾಗಿದ್ದು, ಸಂಸಾರ ನಿರ್ವಹಣೆಗೆ ಸಾಕಾಗುವಷ್ಟು ಕನಿಷ್ಠ ಕೂಲಿಯೂ ಅವರಿಗೆ ಸಿಗುವುದಿಲ್ಲ. ಮೀಸಲಾತಿ ವಿರೋಧಿಸುವವರು ದಲಿತ ಸಮುದಾಯಗಳಂತೆ ಸ್ವಚ್ಛತೆಯ ಕೆಲಸ ಮಾಡುವರೇ? ಅವರಂತೆಯೇ ಸಂಕಷ್ಟ ಅನುಭವಿಸಿ, ಸ್ವಾಭಿಮಾನದ ಜೀವನ ನಡೆಸುವರೇ? ಸಾವಿರಾರು ವರ್ಷಗಳಿಂದ ಇದ್ದ ಅಘೋಷಿತ ಮೀಸಲಾತಿ ಬಗ್ಗೆ ಸ್ವಲ್ಪವೂ ಚಕಾರವೆತ್ತದವರಿಗೆ 70 ವರ್ಷಗಳಿಂದ ಇರುವ ಮೀಸಲಾತಿ ಸೌಲಭ್ಯ ಸಹಿಸಲು ಆಗುತ್ತಿಲ್ಲ. ಒಂದು ವೇಳೆ ಮೀಸಲಾತಿ ಸೌಲಭ್ಯ ಇರದಿದ್ದರೆ, ತಳ ಸಮುದಾಯದವರ ಬದುಕು ಇನ್ನಷ್ಟು ಶೋಚನೀಯವಾಗದೇ ಇರುತ್ತಿರಲಿಲ್ಲ. ದೇಶ ಸ್ವತಂತ್ರಗೊಂಡ ಬಳಿಕ ಮೊದಲ ಬಾರಿಗೆ ಮನುವಾದಿ ಶಕ್ತಿಗಳು ಅಧಿಕಾರ ವಶಪಡಿಸಿಕೊಂಡಿವೆ. ಈ ಅವಕಾಶವನ್ನು ಪೂರ್ಣಪ್ರಮಾಣದಲ್ಲಿ ಸದ್ಬಳಕೆ ಮಾಡಿಕೊಳ್ಳಲೇಬೇಕೆಂದು ಉದ್ದೇಶಿಸಿರುವ ಮೋದಿ ಸರಕಾರ ಅದಕ್ಕಾಗಿ ಕಾರ್ಯ ತಂತ್ರವನ್ನು ರೂಪಿಸುತ್ತಿದೆ. ದೇಶಭಕ್ತಿ ಮತ್ತು ಅಭಿವೃದ್ಧಿಯ ಭ್ರಮೆಯಲ್ಲಿ ಜನರನ್ನು ತೇಲಿಸಿ, ದೀನ ದಲಿತ, ದಮನಿತರ ಹಕ್ಕು ಕಿತ್ತುಕೊಳ್ಳಲು ಬಯಸುತ್ತಿದೆ. ನಮ್ಮ ಚಪ್ಪಲಿ ಹೊಲಿಯುತ್ತಿದ್ದವರು ಸಂವಿಧಾನದ ಬಲದಿಂದ ನಮ್ಮನ್ನು ಆಳುವಂತಾಗಿದೆ ಎಂಬ ಆಕ್ರೋಶ ಅವರಲ್ಲಿದೆ. ಈ ರೀತಿ ಬಹಿರಂಗ ಹೇಳಿಕೆಗಳನ್ನು ಮನುವಾದಿ ಶಕ್ತಿಗಳ ನಾಯಕರು ಆಗಾಗ ನೀಡುತ್ತಿದ್ದಾರೆ.

ಏಕಲವ್ಯನ ಹೆಬ್ಬೆರಳನ್ನು ದಕ್ಷಿಣೆಯಾಗಿ ಕೇಳಿದಂತೆ ಈಗ ಹೊಸ ದ್ರೋಣಾ ಚಾರ್ಯರು ಹುಟ್ಟಿಕೊಂಡಿದ್ದಾರೆ. ಇಂದಿನ ಆಧುನಿಕ ದ್ರೋಣಾಚಾರ್ಯರು ಹೆಬ್ಬೆರಳನ್ನಲ್ಲ, ಕೊರಳನ್ನೇ ದಕ್ಷಿಣೆಯಾಗಿ ಕೊಡುವಂತೆ ಕೇಳುತ್ತಿದ್ದಾರೆ. ರೋಹಿತ್ ವೇಮುಲಾರ ಸಾವು ಅಂಥ ಉದಾಹರಣೆಗಳಲ್ಲಿ ಒಂದು.

ದೇಶಭಕ್ತಿಯ ಪರಾಕಾಷ್ಠೆ ತೋರಿ ಆಗಾಗ ಸಂಘ ಪರಿವಾರದ ಯುವಕರಲ್ಲಿ ಅಖಂಡ ಭಾರತದ ಕಲ್ಪನೆ ಮೂಡಿಸಿ ರೋಮಾಂಚಿತಗೊಳಿಸುವ ಸಂಘದ ನಾಯಕರಿಗೆ ಸಮಗ್ರ ದೇಶದ ಕಲ್ಪನೆಯಿಲ್ಲ. ನಾವೆಲ್ಲ ಹಿಂದೂ-ಒಂದು ಎನ್ನುವ ಮನುವಾದಿಗಳಿಗೆ ಬಿಳಿ ಬಣ್ಣದ ವ್ಯಾಮೋಹ ಹೆಚ್ಚು. ಅದಕ್ಕೆ ಅವರು ದಲಿತರ, ಮಣ್ಣಿನ ಮಕ್ಕಳ ಮತ್ತು ದಕ್ಷಿಣ ಭಾರತೀಯರ ಕಪ್ಪು ಬಣ್ಣದ ಮೇಲೆ ಬೇರೆಯದ್ದೇ ಧೋರಣೆ ಹೊಂದಿದ್ದಾರೆ. ಅದನ್ನು ಬಿಜೆಪಿ ಮುಖಂಡ ತರುಣ್ ವಿಜಯ್ ಅತ್ಯಂತ ಸ್ಪಷ್ಟವಾಗಿ ಸಾಬೀತುಪಡಿಸಿದ್ದಾರೆ.

ದಕ್ಷಿಣದಲ್ಲಿರುವ ಕಪ್ಪು ಬಣ್ಣದ ಜನರೊಂದಿಗೆ ನಾವು ವಾಸವಿಲ್ಲವೇ, ಅವರು ನಮ್ಮುಂದಿಗೆ ಇಲ್ಲವೇ, ನಾವೇನೂ ಜನಾಂಗೀಯವಾದಿಗಳೇ? ಎಂಬ ಅರ್ಥದಲ್ಲಿ ಅವರು ಮಾತನಾಡಿದ್ದಾರೆ. ಒಬ್ಬ ಸಂಘಿಯ ಕೊಳಕು ಮತ್ತು ಕೊಳೆತ ಮನಸ್ಥಿತಿ ಹೇಗಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಉತ್ತರ ಭಾರತದಲ್ಲಿ ವಾಸವಿರುವ ಬಿಳಿ ಬಣ್ಣದ ಆರ್ಯರು ಮಾತ್ರ ಶ್ರೇಷ್ಠ, ದಕ್ಷಿಣ ಭಾರತೀಯರು ಅಲ್ಲ ಎಂಬ ಕಲ್ಪನೆಯೇ ಸಂವಿಧಾನಕ್ಕೆ ವಿರುದ್ಧವಾದದ್ದು. ತರುಣ್ ವಿಜಯ್ ಕ್ಷಮಾಪಣೆ ಕೇಳಿದ್ದಾರೆ. ಆದರೆ ಅವರ ಮನಸ್ಸಿನಲ್ಲಿನ ವಿಕೃತಿ ಅಳಿಸಿ ಹೋಗುವುದಿಲ್ಲ.

ಎಪ್ರಿಲ್ 14ರಂದು ಅಂಬೇಡ್ಕರ್ ಜನ್ಮದಿನ ವಿಜೃಂಭಣೆಯಿಂದ ಆಚರಿಸ ಲಾಗುತ್ತದೆ. ಅಂದು ಪ್ರಧಾನಿ ಮೋದಿ ಮತ್ತೆ ಹೊಸತೊಂದನ್ನು ಘೋಷಿಸಬಹುದು. ಅಂಬೇಡ್ಕರ್ ಅವರನ್ನು ಅಪ್ಪಿಕೊಳ್ಳಲೂಬಹುದು. ಆದರೆ ಅದು ದೂರದೃಷ್ಟಿಯ ದುರುದ್ದೇಶದಿಂದ ಕೂಡಿರುತ್ತದೆ ಹೊರತು ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ಅಂಬೇಡ್ಕರ್ ಅವರ ಭಾವಚಿತ್ರವನ್ನು ಪ್ರಧಾನಿ ಪೂಜಿಸಿದರು ಎಂಬ ಭ್ರಮೆಯಲ್ಲಿ ಮಿಂದೇಳುವ ಮುನ್ನ ಎಚ್ಚರಗೊಳ್ಳಬೇಕು.

ಅಂಬೇಡ್ಕರ್ ಅವರ ಆಶಯ, ತತ್ವ, ವಿಚಾರಗಳನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸುವುದರ ಜೊತೆಗೆ ಸಂವಿಧಾನ ಉಳಿಸಿಕೊಳ್ಳುವ ಅಭಿಯಾನ ನಡೆಯಬೇಕು. ಈ ಕಾರ್ಯ ಒಂದೆರಡು ಶಕ್ತಿಗಳು, ವ್ಯಕ್ತಿಗಳು ಅಥವಾ ಸಂಘಟನೆಗಳಿಂದ ಆಗು ವಂಥದ್ದಲ್ಲ. ಇದಕ್ಕೆ ಎಲ್ಲರೂ ಜೊತೆಗೂಡಬೇಕು. ನಿರಂತರ ಪ್ರಕ್ರಿಯೆಯಾಗಿ ಜಾಗೃತಿ ಸಂಚಲನ ನಡೆಯಬೇಕು. ದೈಹಿಕವಾಗಿ ಅಲ್ಲದಿದ್ದರೂ ವಿಚಾರ, ಶಕ್ತಿ ಮತ್ತು ಆತ್ಮಬಲದ ರೂಪದಲ್ಲಿ ನಮ್ಮ ಮನಸ್ಸಿನಲ್ಲಿ ಅಂಬೇಡ್ಕರ್ ಅವರು ಬೇರೂರಿದ್ದಾರೆ ಎಂಬುದನ್ನು ಯಾವತ್ತೂ ಮರೆಯಬಾದು.

share
ಸನತ್ ಕುಮಾರ್ ಬೆಳಗಲಿ
ಸನತ್ ಕುಮಾರ್ ಬೆಳಗಲಿ
Next Story
X