ವಾಟ್ಸ್ ಆ್ಯಪ್ ನಲ್ಲಿ ವೈದ್ಯರ ಸಲಹೆ ಪಡೆದು ರೈಲಿನಲ್ಲೇ ಮಹಿಳೆಗೆ ಹೆರಿಗೆ ಮಾಡಿಸಿದ ವಿದ್ಯಾರ್ಥಿ

ಅಹ್ಮದಾಬಾದ್, ಎ.10: ಹಿರಿಯ ಸಹಪಾಠಿಗಳೊಂದಿಗೆ ವಾಟ್ಸ್ಯಾಪ್ ಮೂಲಕ ಸಲಹೆ ಕೇಳಿ ಎಂ.ಬಿ.ಬಿ.ಎಸ್. ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬ ರೈಲಿನಲ್ಲೇ ಮಹಿಳೆಯೋರ್ವರಿಗೆ ಹೆರಿಗೆ ಮಾಡಿಸಿದ ಘಟನೆ ಅಹ್ಮದಾಬಾದ್ ನಲ್ಲಿ ನಡೆದಿದೆ.
ಎಂ.ಬಿ.ಬಿ.ಎಸ್. ತರಬೇತಿಯ ಅಂತಿಮ ಘಟ್ಟದಲ್ಲಿರುವ 24 ವರ್ಷದ ವಿಪಿನ್ ಖಡ್ಸೆ ಎಂಬವರೇ ಈ ಅಪರೂಪದ ವಿದ್ಯಾರ್ಥಿ. ನಾಗಪುರದ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿಪಿನ್ ಅಹ್ಮದಾಬಾದ್-ಪುರಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭ 24 ವರ್ಷದ ಚಿತ್ರಲೇಖ ಎನ್ನುವ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು.
"ರೈಲು ನಾಗ್ಪುರದಿಂದ 30 ಕಿ.ಮೀ. ದೂರದಲ್ಲಿರುವಾಗಲೇ ಚಿತ್ರಲೇಖರ ಸಂಬಂಧಿಕರು ರೈಲಿನ ಚೈನ್ ಎಳೆದಿದ್ದರು. ಟಿಸಿ ಹಾಗೂ ಗಾರ್ಡ್ ರೈಲಿನಲ್ಲಿ ಯಾರಾದರೂ ವೈದ್ಯರು ಇದ್ದಾರೆಯೇ ಎಂದು ಹುಡುಕಾಡತೊಡಗಿದರು. ರೈಲಿನಲ್ಲಿ ಪರಿಣತ ವೈದ್ಯರು ಸಿಗಬಹುದು ಎಂದು ಅಂದಾಜಿಸಿ ನಾನು ಸುಮ್ಮನಿದ್ದೆ. ಆದರೆ ಎರಡನೆ ಬಾರಿ ಅವರು ಆಗಮಿಸಿದಾಗ ಸಹಾಯ ಮಾಡಲು ನಾನು ಮುಂದೆ ಬಂದೆ" ಎಂದು ವಿಪಿನ್ ಖಾಸಗಿ ಸುದ್ದಿ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.
ಚಿತ್ರಲೇಖ ಹಾಗೂ ಆಕೆಯ ಪತಿ ಅಹ್ಮದಾಬಾದ್ ನಿಂದ ಛತ್ತೀಸ್ ಗಡದ ರಾಯ್ ಪುರಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ವಿಪಿನ್ ಚಂದ್ರಲೇಖರನ್ನು ಉಪಚರಿಸಲು ತೆರಳಿದಾಗ ತೀವ್ರ ರಕ್ತಸ್ರಾವವಾಗುತ್ತಿತ್ತು. ಮಾನವೀಯತೆಯ ನೆಲೆಯಲ್ಲಿ ಬೋಗಿಯಲ್ಲಿದ್ದ ಇತರ ಪ್ರಯಾಣಿಕರು ಬೇರೆ ಬೋಗಿಗೆ ತೆರಳಿದ್ದರು.
"ಚಂದ್ರಲೇಖರ ಹೆರಿಗೆ ತುಸು ಕಷ್ಟಕರವಾಗಿತ್ತು. ಈ ನಿಟ್ಟಿನಲ್ಲಿ ವೈದ್ಯರ ವಾಟ್ಸ್ಯಾಪ್ ಗ್ರೂಪ್ ನಲ್ಲಿ ನಾನು ಸಹಾಯ ಯಾಚಿಸಿದೆ. ಶಿಖಾ ಮಲಿಕ್ ಎನ್ನುವವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಹೆರಿಗೆ ಮಾಡಿಸಲು ಸಾಧ್ಯವಾಯಿತು" ಎಂದು ವಿಪಿನ್ ಪ್ರತಿಕ್ರಿಯಿಸಿದ್ದಾರೆ.