ವಿಮಾನ ಬಿಟ್ಟು ರೈಲು ಏರಿದ ಶಿವಸೇನೆ ಸಂಸದ ರವೀಂದ್ರ ಗಾಯಕ್‌ವಾಡ್

ಪುಣೆ, ಎ.10: ಏರ್ ಇಂಡಿಯಾ ವಿಮಾನ ಯಾನದ ವೇಳೆ ಸಿಬ್ಬಂದಿಯೋರ್ವರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಶಿವಸೇನೆಯ ಸಂಸದ ರವೀಂದ್ರ ಗಾಯಕ್‌ವಾಡ್ ಸಂಸತ್ ಕಲಾಪದಲ್ಲಿ ಭಾಗವಹಿಸಲು ದಿಲ್ಲಿಗೆ ತೆರಳಲು ವಿಮಾನದ ಬದಲಿಗೆ ರೈಲನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮುಂಬೈ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ರಾಷ್ಟ್ರ ರಾಜಧಾನಿಗೆ ಪ್ರಯಾಣ ಬೆಳೆಸಿದ್ದಾರೆಂದು ತಿಳಿದುಬಂದಿದೆ.
‘‘ಗಾಯಕ್‌ವಾಡ್ ದಿಲ್ಲಿಗೆ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ತೆರಳಿದ್ದಾರೆ. ಅವರು ಈಗಾಗಲೇ ದಿಲ್ಲಿಗೆ ತಲುಪಿದ್ದಾರೆ. ರೈಲು ಮುಂಬೈನ ಮುಂಬೈ ಸೆಂಟ್ರಲ್‌ನಿಂದ ನಿರ್ಗಮಿಸಿದ್ದು, ಉಪನಗರ ಬೊರಿವಲಿಯಲ್ಲೂ ರೈಲು ನಿಲುಗಡೆಯಿದೆ. ಅವರು ಯಾವ ಸ್ಟೇಶನ್‌ನಲ್ಲಿ ರೈಲು ಏರಿದ್ದಾರೆಂದು ಗೊತ್ತಿಲ್ಲ. ಅವರು ಸಂಸತ್ ಕಲಾಪ ಮುಗಿಯುವ ತನಕ ದಿಲ್ಲಿಯಲ್ಲೇ ಇರಲಿದ್ದಾರೆ’’ ಎಂದು ಒಸ್ಮಾನಾಬಾದ್ ಸಂಸದ ಗಾಯಕ್‌ವಾಡ್ ಆಪ್ತ ಜೀತೇಂದ್ರ ಸಿಂಧೆ ತಿಳಿಸಿದ್ದಾರೆ.
ಗಾಯಕ್‌ವಾಡ್ ಸೋಮವಾರ ಯಾವುದೇ ವಿಮಾನವನ್ನು ಏರಿಲ್ಲ ಎಂದು ಪುಣೆ ಏರ್‌ಪೋರ್ಟ್ ಮೂಲಗಳು ತಿಳಿಸಿವೆ.
ತನ್ನ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದ ಗಾಯಕ್‌ವಾಡ್‌ಗೆ ಏರ್‌ಇಂಡಿಯಾ ನಿಷೇಧ ಹೇರಿತ್ತು. ವಿಮಾನಯಾನ ಸಚಿವಾಲಯದ ಒತ್ತಡಕ್ಕೆ ಮಣಿದು ಇತ್ತೀಚೆಗೆ ನಿಷೇಧವನ್ನು ಹಿಂಪಡೆದಿತ್ತು. ಸೋಮವಾರ ಬೆಳಗ್ಗೆ ಪುಣೆಯಿಂದ ದಿಲ್ಲಿಗೆ ಮೊದಲ ವಿಮಾನದಲ್ಲಿ ಗಾಯಕ್‌ವಾಡ್ ತೆರಳಲಿದ್ದಾರೆಂದು ಹೇಳಲಾಗುತ್ತಿತ್ತು. ಆದರೆ, ಅವರು ವಿಮಾನದ ಬದಲಿಗೆ ರೈಲಿನಲ್ಲಿ ತೆರಳಿ ಬೆಳಗ್ಗೆ 9:30ಕ್ಕೆ ದಿಲ್ಲಿ ತಲುಪಿದ್ದಾರೆ.