ಚುನಾವಣಾ ಅಕ್ರಮಗಳಿಗೆ ನಾಂದಿ ಹಾಡಿದ್ದೇ ಯಡಿಯೂರಪ್ಪ-ಈಶ್ವರಪ್ಪ: ಸಿದ್ದರಾಮಯ್ಯ

ಶಿವಮೊಗ್ಗ, ಎ.10: ಕರ್ನಾಟಕದಲ್ಲಿ ಚುನಾವಣಾ ಭ್ರಷ್ಟಾಚಾರಕ್ಕೆ ನಾಂದಿ ಹಾಡಿದವರು ಯಡಿಯೂರಪ್ಪ ಮತ್ತು ಈಶ್ವರಪ್ಪ. ಬೇರೆ ಪಕ್ಷದ ಎಂಟು ಎಂಎಲ್ಎಗಳ ರಾಜೀನಾಮೆ ಕೊಡಿಸಿ ಆಪರೇಷನ್ ಕಮಲ ಮಾಡಿ ಚುನಾವಣೆ ನಡೆಸಿದ ಯಡಿಯೂರಪ್ಪ ಎಷ್ಟು ಕೋಟಿ ರೂ.ಗಳನ್ನು ಖರ್ಚು ಮಾಡಿದ್ದರು ಎಂಬುದನ್ನು ಹೇಳಲಿ. ನಂಜನಗೂಡು, ಗುಂಡ್ಲುಪೇಟೆ ಚುನಾವಣೆಯಲ್ಲಿ ಕಾಂಗ್ರೆಸ್ ಭ್ರಷ್ಟಾಚಾರ ಮಾಡಿದೆ ಎನ್ನಲು ಯಡಿಯೂರಪ್ಪ ಅವರಿಗೆ ಯಾವ ನೈತಿಕ ಹಕ್ಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ರಾಷ್ಟ್ರೀಯ ಭೂಮಾಪನ ದಿನಾಚರಣೆ ಸಮಾವೇಶದಲ್ಲಿ ಪಾಲ್ಗೊಳ್ಳಲು ಇಂದು ಶಿವಮೊಗ್ಗ ಕ್ಕೆ ಆಗಮಿಸಿದ ಮುಖ್ಯಮಂತ್ರಿ ಹೆಲಿಪ್ಯಾಡ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ೧,೦೦೦ ರೂ. ಮತ್ತು ಸಹಾಯಕಿಯರಿಗೆ ೫೦೦ ರೂ. ಗೌರವಧನ ಹೆಚ್ಚಳ ಮಾಡಿ ಇಂದು ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಕಾಂಗ್ರೆಸ್ ಸರಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಒಟ್ಟು ೪,೪೦೦ ರೂ.ಗಳನ್ನು ಹೆಚ್ಚಿಸಿದ್ದು, ಬಿಜೆಪಿ ಸರಕಾರದ ೫ ರ್ಷಗಳ ಅವಧಿಯಲ್ಲಿ ಕೇವಲ ೭೫೦ ರೂ.ಗಳನ್ನು ಮಾತ್ರ ಹೆಚ್ಚಿಸಲಾಗಿತ್ತು. ಇದುವೇ ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರಕ್ಕೆ ಇರುವ ವ್ಯತ್ಯಾಸ ಎಂದವರು ಹೇಳಿದರು.
ಕೇಂದ್ರ ಸರ್ಕಾರ ರಾಷ್ಟ್ರೀಯ ಬ್ಯಾಂಕ್ ಮತ್ತು ವಾಣಿಜ್ಯ ಬ್ಯಾಂಕ್ ಗಳ ಮೂಲಕ ರೈತರಿಗೆ ನೀಡಿರುವ ಸಾಲವನ್ನು ಮನ್ನಾ ಮಾಡಲಿ. ಆ ನಂತರ ರಾಜ್ಯ ಸರಕಾರ ರೈತರ ಸಾಲ ಮನ್ನಾ ಮಾಡಲಿದೆ ಎಂದು ಸಿಎಂ ಈ ಸಂದರ್ಭ ಹೇಳಿದರು. ಉತ್ತರ ಪ್ರದೇಶದಲ್ಲಿ ಚುನಾವಣೆಗಾಗಿ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆ ರೈತರ ಸಾಲಮನ್ನಾ ಮಾಡಲಾಗಿದೆ. ಅದೇ ರೀತಿ ಕೇಂದ್ರ ಸರಕಾರ ಕರ್ನಾಟಕದಲ್ಲೂ ರಾಷ್ಟ್ರೀಯ ಮತ್ತು ವಾಣಿಜ್ಯ ಬ್ಯಾಂಕ್ ಗಳ ಮೂಲಕ ನೀಡಿರುವ ರೈತರ ಸಾಲವನ್ನು ಮನ್ನಾ ಮಾಡಲಿ, ರಾಜ್ಯ ಸರಕಾರ ರೈತರಿಗೆ ಸಹಕಾರಿ ಬ್ಯಾಂಕ್ ಗಳ ಮೂಲಕ ೧೦ ಸಾವಿರ ಕೋ.ರೂ. ಸಾಲ ನೀಡಿದೆ. ರಾಜ್ಯದಲ್ಲಿ ಒಟ್ಟಾರೆ ಶೇ.೨೨ರಷ್ಟು ಜನರಿಗೆ ಸಾಲ ನೀಡಲಾಗಿದೆ. ಆದರೆ ಕೇಂದ್ರ ಸರಕಾರ ಶೇ. ೭೮ ಜನರಿಗೆ ಸಾಲ ನೀಡಿದೆ. ಮೊದಲು ಆ ಸಾಲವನ್ನು ಕೇಂದ್ರ ಸರಕಾರ ಮನ್ನಾ ಮಾಡಲಿ ಎಂದರು.
ಯಡಿಯೂರಪ್ಪನವರಿಗೆ ಎರಡು ನಾಲಿಗೆಗಳಿವೆ. ೨೦೧೦ರಲ್ಲಿ ಅವರು "ರೈತರ ಸಾಲ ಮನ್ನಾ ಮಾಡಲು ಕೇಂದ್ರ ಸರಕಾರ ನನಗೆ ನೋಟು ಮುದ್ರಣ ಮಾಡುವ ಮಿಷನ್ ಕೊಟ್ಟಿಲ್ಲ" ಎಂದು ಹೇಳಿದ್ದು ನೆನಪಿಲ್ಲವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.







