ಸಮರ್ಪಕ ನೀರು ಪೂರೈಕೆಗೆ ಒತ್ತಾಯಿಸಿ ಮನವಿ

ಮಂಗಳೂರು, ಎ.10: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಮರ್ಪಕ ನೀರು ಪೂರೈಕೆ ಮಾಡಲು ಸೂಕ್ತ ಕ್ರಮ ಜರಗಿಸುವಂತೆ ನಗದ ಮಾನವ್ ಸಮಾನತಾ ಮಂಚ್‌ನ ನಿಯೋಗ ಸೋಮವಾರ ದ.ಕ.ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ಶಂಭೂರು ಎಎಂಆರ್ ಡ್ಯಾಂನಲ್ಲಿ ಸದ್ಯ 17 ಮಿ.ಮೀ. ತುಂಬಿದೆ. ಪಶ್ಚಿಮ ಘಟ್ಟಗಳ ಕಡೆಯಿಂದ ಹರಿದು ಬರುವ ನೀರು ಈ ಡ್ಯಾಂಗೆ ಸೇರಿ ಅಲ್ಲಿಂದ ತುಂಬೆಯ ಹೊಸ ವೆಂಟೆಡ್ ಡ್ಯಾಂ ತಲುಪುತ್ತಿವೆ. 2 ತಿಂಗಳಿನಿಂದ ತುಂಬೆ ಹೊಸ ಡ್ಯಾಂನಲ್ಲಿ 5 ಮೀ. ನೀರಿದ್ದರೂ ಕೂಡ ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿವೆ. ದೈನಂದಿನ ಅಗತ್ಯಗಳಿಗೆ ನೀರು ಪಡೆದುಕೊಳ್ಳಲು ಜನಸಾಮಾನ್ಯರು ಪರದಾಡಬೇಕಾದ ಸ್ಥಿತಿ ಇದೆ. ವಾಸ್ತವವಾಗಿ ಮಂಗಳೂರಿನಲ್ಲಿ ಗೃಹಬಳಕೆಗಿಂತ ಕಟ್ಟಡ ನಿರ್ಮಾಣ ಮತ್ತು ಇತರ ವಾಣಿಜ್ಯ ಉದ್ದೇಶಗಳಿಗೆ ನೀರು ಬಳಕೆಯಾಗುತ್ತಿವೆ. ಇದು ನೀರಿನ ಕೃತಕ ಅಭಾವಕ್ಕೆ ಕಾರಣವಾಗಿದೆ. ಹಾಗಾಗಿ ಮನಪಾ ವ್ಯಾಪ್ತಿಯಲ್ಲಿ ದಿನಂಪ್ರತಿ ನೀರು ಪೂರೈಕೆ ಮಾಡಲು ಕ್ರಮ ಜರಗಿಸಬೇಕು ಎಂದು ನಿಯೋಗ ಮನವಿ ಮಾಡಿದೆ.
ಮಾನವ್ ಸಮಾನತಾ ಮಂಚ್‌ನ ಅಧ್ಯಕ್ಷ ಅಲಿ ಹಸನ್, ಪ್ರಧಾನ ಕಾರ್ಯದರ್ಶಿ ರೋಶನ್ ಪತ್ರಾವೊ, ವಸಂತ ಟೈಲರ್, ಬಶೀರ್ ಬೆಂಗರೆ, ಸೂರಜ್ ನಿಯೋಗದಲ್ಲಿದ್ದರು.





