ಜಾರ್ಖಂಡ್ ನ ಗ್ರಾಮವೊಂದನ್ನು ಕ್ರೈಸ್ತಧರ್ಮ ಮುಕ್ತವನ್ನಾಗಿಸಲು ಹೊರಟ ಆರೆಸ್ಸೆಸ್
53 ಕುಟುಂಬಗಳ ‘ಘರ್ ವಾಪ್ಸಿ’

ರಾಂಚಿ, ಎ. 10 : ಜಾರ್ಖಂಡ್ ರಾಜ್ಯದ ಅರ್ಕಿ ಎಂಬಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ದ ‘ಕ್ರೈಸ್ತ ಧರ್ಮ ಮುಕ್ತ’ ಅಭಿಯಾನದಂಗವಾಗಿ ಕಳೆದೊಂದು ತಿಂಗಳ ಅವಧಿಯಲ್ಲಿ ಆದಿವಾಸಿಗಳು ಹೆಚ್ಚಾಗಿ ವಾಸಿಸುವ ಐದು ಗ್ರಾಮಗಳಲ್ಲಿ ಕನಿಷ್ಠ 53 ಕುಟುಂಬಗಳು ಹಿಂದೂ ಧರ್ಮಕ್ಕೆ ಹಿಂದಿರುಗಿವೆ ಎಂದು ಕೆಲ ಆರೆಸ್ಸೆಸ್ ಕಾರ್ಯಕರ್ತರು ಹೇಳಿಕೊಂಡಿದ್ದಾರೆ.
ಕಳೆದ ಹತ್ತು ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಕ್ರೈಸ್ತ ಮಿಶನರಿಗಳಿಂದ ‘ಹೈಜಾಕ್’ ಮಾಡಲ್ಪಟ್ಟಿದೆ ಎಂದು ಆರೆಸ್ಸೆಸ್ ಹೇಳಿಕೊಳ್ಳುತ್ತಿರುವ ಸಿಂದ್ರಿ ಪಂಚಾಯತ್ ನಲ್ಲಿ ಈ ಮತಾಂತರಗೊಂಡಿವೆಯೆನ್ನಲಾದ ಕುಟುಂಬಗಳು ವಾಸಿಸುತ್ತಿವೆ. ಈ ಘರ್ ವಾಪ್ಸಿ ಎಪ್ರಿಲ್ ತಿಂಗಳಾದ್ಯಂತ ಮುಂದುವರಿಯುವುದು ಎಂದು ಮೂಲಗಳು ತಿಳಿಸಿವೆ .
ಈ ಅಭಿಯಾನದ ನೇತೃತ್ವ ವಹಿಸಿರುವ ಆರೆಸ್ಸೆಸ್ ಸಂಯೋಜಕ ಲಕ್ಷ್ಮಣ್ ಸಿಂಗ್ ಮುಂಡಾ ಪ್ರಕಾರ ‘‘ಇದನ್ನು ಮತಾಂತರ ಎಂದು ಹೇಳಿಕೊಳ್ಳುವಂತಿಲ್ಲ. ನಾವು ಕಳೆದುಕೊಂಡ ನಮ್ಮ ಸಹೋದರ-ಸಹೋದರಿಯರನ್ನು ಮರಳಿ ನಮ್ಮ ಧರ್ಮಕ್ಕೆ ಕರೆತರಲಾಗುತ್ತಿದೆ ಅಷ್ಟೆ,’’ ಎಂದು ಹೇಳಿದ್ದಾರೆ. ‘‘ನಮಗೆ ಕ್ರೈಸ್ತ ಧರ್ಮ ಮುಕ್ತ ಬ್ಲಾಕ್ ಬೇಕು. ಗ್ರಾಮಸ್ಥರು ಶೀಘ್ರದಲ್ಲಿಯೇ ಅವರ ಮೂಲಗಳಿಗೆ ಹಿಂದಿರುಗಲಿದ್ದಾರೆ,’’ ಎಂದು ಸಿಂಗ್ ಹೇಳಿದರು. ಈ ಆದಿವಾಸಿಗಳನ್ನು ಮಿಷನರಿಗಳು ಆಮಿಷ ತೋರಿಸಿ ಕ್ರೈಸ್ತ ಧರ್ಮಕ್ಕೆ ಮತಾಂತರಿಸಿದ್ದರು ಎಂದು ಅವರು ಆರೋಪಿಸಿದ್ದಾರೆ.
ಎಪ್ರಿಲ್ 7ರಂದು ಕನಿಷ್ಠ ಏಳು ಕ್ರೈಸ್ತ ಕುಟುಂಬಗಳು ಕೊಚಸಿಂಧ್ರಿ ಗ್ರಾಮದಲ್ಲಿ "ಶುದ್ಧೀಕರಣ ಪ್ರಕ್ರಿಯೆ"ಗೆ ಒಳಗಾಗಿದ್ದರು. ಅವರ ಹಣೆಗೆ ಗಂಧ ಹಚ್ಚಿ, ಪಾದಗಳನ್ನು ತೊಳೆದು, ತಿಲಕವಿಟ್ಟು ಅರ್ಚಕರು ಅವರನ್ನು ಹಿಂದೂ ಧರ್ಮಕ್ಕೆ ಬರಮಾಡಿಕೊಂಡಿದ್ದರು. ಬಿಜೆಪಿ ಆಡಳಿತವಿರುವ ಈ ರಾಜ್ಯದ ಒಟ್ಟು 30 ಮಿಲಿಯನ್ ಜನಸಂಖ್ಯೆಯಲ್ಲಿ ಶೇ 26.2ರಷ್ಟು ಮಂದಿ ಆದಿವಾಸಿಗಳಾಗಿದ್ದಾರೆ.