ಪ್ರಕಾಶ್ ಅಮಾನತು ಆದೇಶ ಹಿಂಪಡೆಯಲು ಬಿಜೆಪಿ ಗಡುವು
ಉಡುಪಿ, ಎ.10: ಮಲ್ಪೆ ಪೊಲೀಸ್ ಸಿಬ್ಬಂದಿ ಪ್ರಕಾಶ್ ಅಮಾನತು ಪ್ರಕರಣದ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸಬೇಕು ಮತ್ತು 24 ಗಂಟೆಯೊಳಗೆ ಪ್ರಕಾಶ್ ಅಮಾನತು ಆದೇಶವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಇದರ ವಿರುದ್ಧ ಎಸ್ಪಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಮಾಜಿ ಶಾಸಕ ಕೆ.ರಘುಪತಿ ಭಟ್ ಎಚ್ಚರಿಕೆ ನೀಡಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕಾಶ್‌ರನ್ನು ಕ್ರಿಮಿನಲ್ ಕೇಸ್ ದಾಖಲಾಗಿದ್ದಕ್ಕೆ ಅಮಾನತುಗೊಳಿಸಿಲ್ಲ. ಬದಲು ಸಾರ್ವಜನಿಕ ಸ್ಥಳದಲ್ಲಿ ಏರುಧ್ವನಿಯಲ್ಲಿ ಮಾತನಾಡಿದರು ಎಂಬ ಕಾರಣಕ್ಕೆ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಎಫ್‌ಐಆರ್ ದಾಖಲಾಗುವ ಮೊದಲೇ ಪ್ರಕಾಶ್‌ರನ್ನು ಏಕಾಏಕಿ ಅಮಾನತು ಮಾಡಲಾಗಿದೆ. ಇದರ ಹಿಂದೆ ರಾಜಕೀಯ ಅಡಗಿದೆ ಎಂದು ಆರೋಪಿಸಿದರು.
ಮಲ್ಪೆ ಎಸ್ಸೈ ಪ್ರಕಾಶ್‌ರನ್ನು ಸಮವಸ್ತ್ರದಲ್ಲಿ ವೃತ್ತ ನಿರೀಕ್ಷಕರಲ್ಲಿಗೆ ಕರೆದು ಕೊಂಡು ಹೋಗುವುದಾಗಿ ಹೇಳಿ ನೇರವಾಗಿ ಸಚಿವರ ಫ್ಯಾಕ್ಟರಿಗೆ ಕರೆದುಕೊಂಡು ಹೋಗಿ ಸಚಿವರ ಪತ್ನಿ ಮುಂದೆ ಕುಮಾರ್‌ನ ಕಾಲು ಹಿಡಿಸಿ ಕ್ಷಮೆ ಕೇಳಿಸಿದ್ದಾರೆ. ಆದ್ದರಿಂದ ನಿಜವಾಗಿ ಅಮಾನತಾಗಬೇಕಾದವರು ಮಲ್ಪೆ ಎಸ್ಸೈ. ಈ ಪ್ರಕರಣ ದಲ್ಲಿ ಎಸ್ಪಿಯವರು ಯಾವುದೇ ಕಾರಣಕ್ಕೂ ರಾಜಕೀಯ ಒತ್ತಡಕ್ಕೆ ಮಣಿಯ ಬಾರದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು, ಬಿಜೆಪಿ ಮುಖಂಡರಾದ ಪ್ರಭಾಕರ ಪೂಜಾರಿ, ಯಶ್ಪಾಲ್ ಸುವರ್ಣ, ನಯನ ಗಣೇಶ್ ಮೊದಲಾದ ವರು ಉಪಸ್ಥಿತರಿದ್ದರು.







