ಬಾಹುಬಲಿ -2 ಚಿತ್ರ ಬಿಡುಗಡೆಗೆ ವಿರೋಧ: ಎ.28ರಂದು ಬೆಂಗಳೂರು ಬಂದ್

ಬೆಂಗಳೂರು, ಎ.10: ರಾಜ್ಯದಲ್ಲಿ ಬಾಹುಬಲಿ-2 ಚಲನಚಿತ್ರ ಬಿಡುಗಡೆ ಮಾಡುವುದನ್ನು ವಿರೋಧಿಸಿ ಎ.28 ರಂದು ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ ಎಂದು ಕನ್ನಡ ಚಳವಳಿ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕುಡಿಯುವ ನೀರಿಗೂ ಪರಿತಪಿಸುತ್ತಿರುವ ಸಂದರ್ಭದಲ್ಲಿ ಸರಕಾರ ತಮಿಳು ನಾಡಿಗೆ ಕಾವೇರಿ ನೀರನ್ನು ಬಿಡುಗಡೆ ಮಾಡಿದೆ. ಆದರೆ, ಬಾಹುಬಲಿ ಸಿನೆಮಾದಲ್ಲಿ ನಟಿಸಿರುವ ಸತ್ಯರಾಜ್ ಎಂಬುವವರು ಕನ್ನಡಿಗರ ಬಗ್ಗೆ, ರಾಜ್ಯದ ಕುರಿತು ಹೀನಾಯವಾಗಿ ಮಾತನಾಡಿರುವುದು ಸರಿಯಲ್ಲ. ಅವರ ಮಾತುಗಳು ರಾಜ್ಯಕ್ಕೆ ಮಾಡಿದ ಅವಮಾನವಾಗಿದೆ. ಹೀಗಾಗಿ ನಮ್ಮ ಹೋರಾಟ ಬಾಹುಬಲಿ ಚಿತ್ರದ ವಿರುದ್ಧವಲ್ಲ. ಅದರಲ್ಲಿ ನಟಿಸಿರುವ, ಕನ್ನಡ ವಿರೋಧಿ ಹೇಳಿಕೆ ನೀಡಿರುವ ಸತ್ಯರಾಜ್ ವಿರುದ್ಧವಾಗಿದೆ ಎಂದು ಹೇಳಿದರು.
ಮಾತನಾಡುವ ವೇಳೆ ಗಾಂಭೀರ್ಯತೆ ಇರಬೇಕು. ಆದರೆ, ಸತ್ಯರಾಜ್ ಅಲ್ಲಿನ ಜನರನ್ನು ಗುಂಪುಕಟ್ಟಿಕೊಂಡು ರಾಜ್ಯದ ಮೇಲೆ ಅನಗತ್ಯವಾಗಿ ಟೀಕೆ ಮಾಡುತ್ತಾ ಕನ್ನಡಿಗರನ್ನು ತೆಗಳಿರುವುದು ಖಂಡನೀಯ. ಹೀಗಾಗಿ ಕೂಡಲೇ ಅವರು ಕನ್ನಡಿಗರ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅವರು ನಟಿಸುವ ಯಾವುದೇ ಸಿನೆಮಾವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ. ಎ.28 ರಂದು ನಗರದ ಪುರಭವನದಿಂದ ಸ್ವಾತಂತ್ರ ಉದ್ಯಾನವನದವರೆಗೆ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ಅಂದು ಯಾವುದೇ ಚಿತ್ರ ಮಂದಿರದಲ್ಲಿ ಚಿತ್ರ ಬಿಡುಗಡೆ ಮಾಡಿದರೂ ಅದರ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಂದರು.







