ಬ್ರಿಟನ್‌ನಿಂದ 12,070 ಕಿ.ಮೀ. ದೂರದ ಚೀನಾದತ್ತ ಪ್ರಯಾಣ ಬೆಳೆಸಿದ ರೈಲು
17 ದಿನಗಳ ದೀರ್ಘಾವಧಿ ಪ್ರಯಾಣ

ಲಂಡನ್, ಎ. 10: ಬ್ರಿಟನ್‌ನಿಂದ ಚೀನಾಕ್ಕೆ ಸರಕು ಹೊತ್ತ ಪ್ರಥಮ ರೈಲು ಸೋಮವಾರ ಎಸೆಕ್ಸ್‌ನಿಂದ ಹೊರಟಿದೆ.ವಿಸ್ಕಿ, ಲಘು ಪಾನೀಯ, ವಿಟಮಿನ್‌ಗಳು ಮತ್ತು ಔಷಧಿಗಳನ್ನು ಹೊತ್ತ 30 ಕಂಟೇನರ್‌ಗಳು 12,070 ಕಿ.ಮೀ. ದೂರವನ್ನು 17 ದಿನಗಳಲ್ಲಿ ಕ್ರಮಿಸಿ ಚೀನಾದ ಪೂರ್ವದ ರಾಜ್ಯ ಝೆಜಿಯಾಂಗ್‌ನ ಖ್ಯಾತ ಸಗಟು ಮಾರುಕಟ್ಟೆ ಪಟ್ಟಣ ಯಿವುವನ್ನು ತಲುಪಲಿವೆ ಎಂದು ಬಿಬಿಸಿ ವರದಿ ಮಾಡಿದೆ.
ರೈಲು ಫ್ರಾನ್ಸ್, ಬೆಲ್ಜಿಯಂ, ಜರ್ಮನಿ, ಪೋಲ್ಯಾಂಡ್, ಬೆಲಾರುಸ್, ರಶ್ಯ, ಕಝಖ್‌ಸ್ತಾನ್- ಈ ಏಳು ದೇಶಗಳನ್ನು ದಾಟಿ ಎಪ್ರಿಲ್ 27ರಂದು ಗಮ್ಯ ಸ್ಥಾನವನ್ನು ತಲುಪಲಿದೆ.
2,000 ವರ್ಷಗಳಿಗೂ ಹೆಚ್ಚು ಹಿಂದೆ ಪಾಶ್ಚಿಮಾತ್ಯ ದೇಶಗಳೊಂದಿಗೆ ಹೊಂದಿದ್ದ ಪ್ರಾಚೀನ ರೇಶ್ಮೆ ವ್ಯಾಪಾರ ಮಾರ್ಗಕ್ಕೆ ಮರುಜೀವ ನೀಡುವ ಚೀನಾದ ‘ಒಂದು ವಲಯ, ಒಂದು ರಸ್ತೆ’ ಯೋಜನೆಯ ಭಾಗವಾಗಿ ಈ ರೈಲು ಸೇವೆಯನ್ನು ಆರಂಭಿಸಲಾಗಿದೆ.
ವಿರುದ್ಧ ದಿಕ್ಕಿನಲ್ಲಿ, ಅಂದರೆ ಚೀನಾದಿಂದ ಬ್ರಿಟನ್‌ಗೆ ಮೊದಲ ಸರಕು ರೈಲು ಮೂರು ತಿಂಗಳ ಹಿಂದೆ ಆಗಮಿಸಿತ್ತು.ಬ್ರಿಟನ್‌ನ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್ ಈ ಯೋಜನೆಗೆ ಚಾಲನೆ ನೀಡಿದ್ದರು.







