ಕುಲಭೂಷಣ್ ಜಾಧವ್‌ಗೆ ಮರಣದಂಡನೆ: ಪಾಕ್ ನ್ಯಾಯಾಲಯದ ತೀರ್ಪಿಗೆ ಭಾರತದ ವಿರೋಧ

ಹೊಸದಿಲ್ಲಿ, ಎ.10: ಭಾರತದ ನೌಕಾಪಡೆಯ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನದ ಸೇನಾ ನ್ಯಾಯಾಲಯ ಮರಣದಂಡನೆ ವಿಧಿಸಿರುವ ಬಗ್ಗೆ ಭಾರತವು ಪಾಕಿಸ್ತಾನಕ್ಕೆ ವಿಜ್ಞಾಪನಾ ಪತ್ರ ನೀಡಿದೆ.
ಭಾರತದಲ್ಲಿ ಪಾಕ್ ರಾಯಭಾರಿಯಾಗಿರುವ ಅಬ್ದುಲ್ ಬಾಸಿತ್‌ರನ್ನು ತನ್ನ ಕಚೇರಿಗೆ ಕರೆಸಿಕೊಂಡ ವಿದೇಶ ವ್ಯವಹಾರ ಇಲಾಖೆಯ ಕಾರ್ಯದರ್ಶಿ ಎಸ್.ಜೈಶಂಕರ್ , ಒಂದು ವೇಳೆ ಜಾಧವ್‌ರಿಗೆ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆಯನ್ನು ಕಾರ್ಯಗತಗೊಳಿಸಿದರೆ ಅದನ್ನು ಪೂರ್ವಯೋಜಿತ ಕೊಲೆ ಕೃತ್ಯ ಎಂದು ಭಾರತದ ಜನತೆ ಮತ್ತು ಸರಕಾರ ಪರಿಗಣಿಸುತ್ತದೆ ಎಂದು ಸ್ಪಷ್ಟಪಡಿಸಿದರು.
ಇರಾನ್‌ನಲ್ಲಿದ್ದ ಜಾಧವ್‌ರನ್ನು ಕಳೆದ ವರ್ಷ ಅಪಹರಿಸಲಾಗಿತ್ತು ಮತ್ತು ಬಳಿಕ ಅವರು ಪಾಕಿಸ್ತಾನದಲ್ಲಿ ಪತ್ತೆಯಾದ ಬಗ್ಗೆ ಪಾಕ್ ಸರಕಾರ ನಂಬಲರ್ಹ ಮಾಹಿತಿ ನೀಡುತ್ತಿಲ್ಲ. ಅಂತರಾಷ್ಟ್ರೀಯ ಕಾನೂನಿನ ಪ್ರಕಾರ ಇಸ್ಲಮಾಬಾದಿನಲ್ಲಿರುವ ಭಾರತೀಯ ದೂತಾವಾಸದಲ್ಲಿ ಪ್ರವೇಶಾವಕಾಶ ನೀಡುವಂತೆ ಕೇಂದ್ರ ಸರಕಾರ 13 ಬಾರಿ ಮನವಿ ಸಲ್ಲಿಸಿದೆ. (2016ರ ಮಾರ್ಚ್ 25ರಿಂದ 2017ರ ಮಾರ್ಚ್ 31ರವರೆಗೆ). ಆದರೆ ಇದಕ್ಕೆ ಪಾಕ್ ಅಧಿಕಾರಿಗಳು ಅವಕಾಶ ನೀಡಲಿಲ್ಲ ಎಂದು ಪಾಕ್ ರಾಯಭಾರಿಗೆ ನೀಡಲಾಗಿರುವ ವಿಜ್ಞಾಪನಾ ಪತ್ರದಲ್ಲಿ ತಿಳಿಸಲಾಗಿದೆ.







