ಕುಮಾರ್ ಹಲ್ಲೆ ಪ್ರಕರಣ: ಸಮಗ್ರ ತನಿಖೆಗೆ ಆಗ್ರಹ
ಉಡುಪಿ, ಎ.10: ಮಲ್ಪೆಯ ರಾಜ್‌ಫಿಶ್ ಮಿಲ್ ಹಾಗೂ ಆಯಿಲ್ ಕಂಪೆನಿಯ ಸಿಬ್ಬಂದಿಯಾದ ಕುಮಾರ್ ಶರಣಪ್ಪ ನಿಡಗುಂಜಿ ಅವರ ಮೇಲೆ ಮಲ್ಪೆ ಠಾಣೆಯ ಪಿಸಿ ಪ್ರಕಾಶ್ ನಡೆಸಿದ ಹಲ್ಲೆಯ ಕುರಿತಂತೆ ಸಮಗ್ರ ತನಿಖೆ ನಡೆಸುವಂತೆ ರಾಜ್‌ಫಿಶ್ ಮಿಲ್ ಮತ್ತು ಆಯಿಲ್ ಕಂಪೆನಿಯ ಮ್ಯಾನೇಜರ್ ಜನಾರ್ದನ್ ಹಾಗೂ ಸಿಬ್ಬಂದಿ ಆಗ್ರಹಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಡಗುಂಜಿ ಸವದತ್ತಿ ತಾಲೂಕಿನ ಶರಣಪ್ಪಎಂಬವರ ಮಗನಾದ ಕುಮಾರ್ ಶರಣಪ್ಪ ನಿಡಗುಂಜಿ ತಮ್ಮ ಸಂಸ್ಥೆಯಲ್ಲಿ ಟ್ರಾಕ್ಟರ್ ಡೈವರ್ ಆಗಿ ಸುಮಾರು 15 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದು, ಒಳ್ಳೆಯ ಗುಣನಡತೆಯವರಾಗಿದ್ದಾರೆ. ಇವರ ಮೇಲೆ ಯಾವತ್ತೂ ಯಾವುದೇ ರೀತಿಯ ದುರ್ನಡತೆಯ ದೂರುಗಳು ಬಂದಿಲ್ಲ ಎಂದು ಸಿಬ್ಬಂದಿ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕುಮಾರ್ ಮೇಲಿನ ಹಲ್ಲೆಗಾಗಿ ತನ್ನ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರಿಂದ ಹೆದರಿದ ಪ್ರಕಾಶ್ ತನ್ನ ಪೊಲೀಸ್ ನೌಕರಿಗೆ ತೊಂದರೆ ಯಾಗುತ್ತದೆ ಎಂಬ ಕಾರಣಕ್ಕಾಗಿ ಹೆಂಡತಿಯ ಮೂಲಕ ಉಡುಪಿ ಜಿಲ್ಲಾ ಮಹಿಳಾ ಠಾಣೆಯಲ್ಲಿ ನಿರಪರಾಧಿಗಳಾಗಿರುವ ಕುಮಾರ್ ಮತ್ತು ಬಾಲಾಜಿ ವಿರುಧ್ಧ ಸುಳ್ಳು ಪ್ರಕರಣವನ್ನು ದಾಖಲು ಮಾಡಿದ್ದಾರೆ ಎಂದು ಹೇಳಿಕೆ ತಿಳಿಸಿದೆ.





