ಕುಂದಾಪುರ ತಾಪಂ ಇಒ ವರ್ಗಾವಣೆಗೆ ಆಗ್ರಹಿಸಿ ಸಭಾತ್ಯಾಗ

ಕುಂದಾಪುರ, ಎ.10: ಕುಂದಾಪುರ ತಾಪಂ ಸಭಾಭವನದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮನಬಂದಂತೆ ವರ್ತಿಸುತ್ತಿರುವ ತಾಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಚೆನ್ನಪ್ಪಮೊಯ್ಲಿ ಅವರನ್ನು ಕೂಡಲೇ ವರ್ಗಾವಣೆ ಮಾಡುವಂತೆ ಆಗ್ರಹಿಸಿ ಆಡಳಿತ ಪಕ್ಷದ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.
ತಾಪಂ ಅಧ್ಯಕ್ಷೆ ಜಯಶ್ರೀ ಮೊಗವೀರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯ ಉಮೇಶ್ ಶೆಟ್ಟಿ ಕಲ್ಲದೆ, ತಾಪಂ ಸದಸ್ಯರ ಅಹವಾಲುಗಳಿಗೆ ಇಒ ಸರಿಯಾಗಿ ಸ್ಪಂದಿಸುತ್ತಿಲ್ಲ. ತಾಪಂಗೆ ಸಂಬಂಧಿಸಿದ ಸಿಂಗಲ್ ಲೇಔಟ್‌ನ್ನು ಅವರೇ ಮಾಡುತ್ತಿದ್ದಾರೆ. ಸಾಮಾನ್ಯ ಸಭೆಯಲ್ಲಿ ತೀರ್ಮಾನವಾಗುವ ಮೊದಲೇ ಅವರು ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಅವರು ಅಧಿಕಾರವನ್ನು ಮೀರಿ ವರ್ತಿಸುತ್ತಿದ್ದಾರೆ ಎಂದು ದೂರಿದರು.
‘ಯೋಜನೆಗೆ ಬಂದ ಹಣ ವಿನಿಯೋಗಿಸಲು ಇಒಗೆ ಹೇಳಿದರೂ ಈವರೆಗೆ ಹಣ ವಿನಿಯೋಗಿಸದೆ 15 ಲಕ್ಷ ರೂ. ಹಣ ವಾಪಾಸು ಹೋಗಿದೆ. ಇದಕ್ಕೆ ಇಒ ಅವರೇ ನೇರ ಹೊಣೆ. ಗ್ರಾಪಂಗಳ ಬಜೆಟ್‌ನ್ನು ಪಂಚಾಯತ್ ರಾಜ್ ಕಾನೂನುಗಳ ಪ್ರಕಾರ ಮಾ.10ರೊಳಗೆ ಗ್ರಾಪಂಗಳಿಂದ ಅನುಮೋದನೆ ಪಡೆದು ಮಾ.25ರೊಳಗೆ ತಾಪಂಗೆ ಬಂದು ಇಲ್ಲಿಂದ ಆಡಳಿತಾತ್ಮಕ ಮಂಜೂರಾತಿ ಪಡೆದುಕೊಳ್ಳಬೇಕು. ಆದರೆ ಈವರೆಗೂ ಆ ಕೆಲಸವಾಗಿಲ್ಲ. 65 ಗ್ರಾಪಂ ಗಳ ಪೈಕಿ ಏಳು ಗ್ರಾಪಂಗಳಿಂದ ಮಾತ್ರ ಬಂದಿದೆ ಎಂದು ಅಧ್ಯಕ್ಷರು ಆರೋಪಿಸಿದರು.
ಕಾಮಗಾರಿ ವೀಕ್ಷಣೆ ಮಾಡುವ ಅಧಿಕಾರ ಅವರಿಗಿಲ್ಲದಿದ್ದರೂ ಕೆಲವು ಯೋಜನೆಗಳ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿ ಯೋಜನೆ ಸರಿಯಾಗಿಲ್ಲ ಎಂಬುದಾಗಿ ಆರೋಪಗಳನ್ನು ಮಾಡುತ್ತಿದ್ದಾರೆ. ಆದುದರಿಂದ ಸದಸ್ಯರ ಒತ್ತಾಯದ ಮೇರೆಗೆ ಇಒ ಅವರನ್ನು ವರ್ಗಾವಣೆ ಮಾಡುವಂತೆ ಸರ್ವಾನು ಮತದಿಂದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ಈ ವೇಳೆ ಸಭೆಯಲ್ಲಿ ಹಾಜರಿದ್ದ ಇಒ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸದಸ್ಯರು ಅವರನ್ನು ಮಾತನಾಡದಂತೆ ತಾಕೀತು ಮಾಡಿ ಸಭೆಯಿಂದ ಹೊರನಡೆದರು. ನಂತರ ಮಾತನಾಡಿದ ಇಒ ಚೆನ್ನಪ್ಪಮೊಯ್ಲಿ, "ತಾಪಂನ ಎಲ್ಲ ಕೆಲಸಗಳನ್ನು ನಾನು ಕಾನೂನು ಬದ್ಧವಾಗಿಯೇ ಮಾಡುತ್ತಿದ್ದೇನೆ. ನನ್ನದೇನು ತಪ್ಪಿಲ್ಲ. ನನ್ನ ಬಳಿ ಎಲ್ಲಾ ದಾಖಲೆಗಳಿವೆ. ಸದಸ್ಯರು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು. ಆದರೆ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ನ ಸದಸ್ಯರು ಸಾಮಾನ್ಯ ಸಭೆಗೆ ಗೈರು ಹಾಜರಾಗಿದ್ದರು. ‘ಸಭೆಗೆ ಮುನ್ನ ಕರೆದ ಸರ್ವ ಸದಸ್ಯರ ಸಭೆಯಲ್ಲಿ ಇೊ ಬಗ್ಗೆ ಚರ್ಚಿಸಲಾಯಿತು. ಮುಂದೆ ಈ ರೀತಿ ನಡೆದು ಕೊಳ್ಳದಂತೆ ಇಒಗೆ ತಿಳಿಹೇಳುವ, ಮತ್ತೆ ಇದೇ ರೀತಿ ಮುಂದುವರೆಸಿದರೆ ನಾವೆಲ್ಲ ಒಂದಾಗಿ ಹೋರಾಡುವ, ಈಗ ಈ ವಿವಾದವನ್ನು ಸೌಹಾರ್ದತೆಯಿಂದ ಬಗೆಹರಿಸುವ ಎಂದು ಕೇಳಿಕೊಂಡರು ಬಿಜೆಪಿಯವರು ಅದಕ್ಕೆ ಒಪ್ಪಿಗೆ ನೀಡಿಲ್ಲ ಎಂದು ಕಾಂಗ್ರೆಸ್ ಸದಸ್ಯರು ದೂರಿದರು.







