ಡಿಸಿ ಕೊಲೆಯತ್ನ: ಛಾಯಾಚಿತ್ರದಲ್ಲಿದ್ದ ಆರೋಪಿಯ ಸೆರೆ
ಉಡುಪಿ, ಎ.10: ಜಿಲ್ಲಾಧಿಕಾರಿ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಒದಗಿಸಲಾದ ಛಾಯಾಚಿತ್ರದಲ್ಲಿದ್ದ ಆರೋಪಿಯೊಬ್ಬನನ್ನು ಇಂದು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಕಂಡ್ಲೂರಿನ ಸಂಜೀವ ಪೂಜಾರಿ(56) ಬಂಧಿತ ಆರೋಪಿ.
ಎ.2ರಂದು ರಾತ್ರಿ ವೇಳೆ ಜಿಲ್ಲಾಧಿಕಾರಿ ಸಹಿತ ಇತರ ಅಧಿಕಾರಿಗಳು ಅಕ್ರಮ ಮರಳುಗಾರಿಕೆ ಪರಿಶೀಲಿಸಲು ತೆರಳಿದಾಗ 50 ಮಂದಿಯ ಗುಂಪು ದಾಳಿ ನಡೆಸಿತ್ತು. ಈ ವೇಳೆ ಜಿಲ್ಲಾಧಿಕಾರಿ ಗುಂಪಿನಲ್ಲಿದ್ದ ಮೂವರು ಆರೋಪಿಗಳ ಫೋಟೋ ವನ್ನು ತಮ್ಮ ಮೊಬೈಲ್‌ನಲ್ಲಿ ಕ್ಲಿಕ್ಕಿಸಿದ್ದರು. ಈ ದಾಖಲೆಯನ್ನು ಅವರು ಪೊಲೀಸರಿಗೆ ಒದಗಿಸಿದ್ದರು. ಅದರ ಆಧಾರದಲ್ಲಿ ಇಂದು ಸಂಜೀವ ಪೂಜಾರಿಯನ್ನು ಬಂಧಿಸಲಾಗಿದೆ. ಈ ಫೋಟೋದಲ್ಲಿ ಇನ್ನೋರ್ವ ಆರೋಪಿ ಭಾಸ್ಕರ ಮೊಗವೀರ ಈಗಾಗಲೇ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮತ್ತೊಬ್ಬ ಆರೋಪಿ ಸಂದೀಪ್ ಎಂಬಾತ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಬಂಧಿತ ಸಂಜೀವ ಪೂಜಾರಿಯನ್ನು ಉಡುಪಿ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಇಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.





