ಬೇಸ್ತು ಬಿದ್ದ ಆಸ್ಟ್ರೇಲಿಯಾ ಟಿವಿ ನಿರೂಪಕಿ ಆಕೆ ಮಾಡಿದ್ದೇನು ?

ಹೊಸದಿಲ್ಲಿ, ಎ. 10 : ಭಾರತದಲ್ಲಿ ಟಿವಿ ನಿರೂಪಕಿಯೊಬ್ಬರು ತಾನು ಓದುತ್ತಿರುವ ಸುದ್ದಿ ತನ್ನ ಪತಿಯ ಸಾವಿನ ಕುರಿತು ಎಂದು ಗೊತ್ತಾದ ಬಳಿಕವೂ ಧೃತಿಗೆಡದೆ ಕರ್ತವ್ಯ ನಿರ್ವಹಿಸಿದ ಸುದ್ದಿ ಭಾರೀ ಚರ್ಚೆಯಲ್ಲಿರುವಾಗಲೇ ಆಸ್ಟ್ರೇಲಿಯಾದ ಟಿವಿ ನಿರೂಪಕಿಯೊಬ್ಬರು ಬೇರೆಯದೇ ಕಾರಣಕ್ಕೆ ಸುದ್ದಿಯಾಗಿದ್ದಾರೆ.
ಅಲ್ಲಿನ ಎಬಿಸಿ 24 ಟಿವಿ ಚಾನಲ್ ನ ನತಾಶ ಎಕ್ಸೆಲ್ಬಿ ಸಂಜೆಯ ಸುದ್ದಿ ಬುಲೆಟಿನ್ ಓದುತ್ತಿದ್ದರು. ಆದರೆ ಒಂದು ಸುದ್ದಿ ಓದಿ ಅದು ಪ್ರಸಾರವಾಗುತ್ತಿರುವಾಗ ನತಾಶ ಕೂತಲ್ಲೇ ಮೈಮರೆತು ಪೆನ್ ಒಂದನ್ನು ಹಿಡಿದು ಆಟವಾಡಲು ಪ್ರಾರಂಭಿಸಿದ್ದಾರೆ. ಅಷ್ಟರಲ್ಲೇ ಸುದ್ದಿ ಪ್ರಸಾರ ಮುಕ್ತಾಯವಾಗಿ ನೇರ ಪ್ರಸಾರದಲ್ಲಿ ಬಂದಾಗಲೂ ಆಕೆಗೆ ಗೊತ್ತಾಗಿಲ್ಲ. ಈ ಮೂಲಕ ವೀಕ್ಷಕರಿಗೆ ಪುಕ್ಕಟೆ ಮನರಂಜನೆ ಸಿಕ್ಕಿದೆ.
ಆದರೆ ಕೆಲವೇ ಕ್ಷಣಗಳಲ್ಲಿ ಆಕೆಗೆ ತನ್ನನ್ನು ವೀಕ್ಷಕರು ನೋಡುತ್ತಿದ್ದಾರೆ ಎಂಬುದು ಅರಿವಾಗಿದೆ. ಆಗ ಆಕೆ ಹೌಹಾರಿದ ಬಗೆ ವೀಕ್ಷಕರಿಗೆ ಇನ್ನಷ್ಟು ಮನರಂಜನೆ ಒದಗಿಸಿದೆ. ತಕ್ಷಣ ಸಾವರಿಸಿಕೊಂಡ ಆಕೆ " ಇನ್ನು ಮುಂದೆ ಕ್ರೀಡಾ ಸುದ್ದಿಗಳು " ಎಂದು ಘೋಷಿಸಿ ಇನ್ನೊಬ್ಬ ನಿರೂಪಕಿಗೆ ಕಾರ್ಯಕ್ರಮ ಪಾಸ್ ಮಾಡಿದ್ದಾಳೆ.
ನತಾಶ ಈ ರೀತಿ ಮಾಡಿರುವುದು ಇದೇ ಮೊದಲಲ್ಲ. ಈ ಹಿಂದೆ ಗಂಭೀರ ಸುದ್ದಿಯೊಂದನ್ನು ಓದುವಾಗ ನಕ್ಕು ವಿವಾದಕ್ಕೆ ಈಡಾಗಿ ಬಳಿಕ ಕ್ಷಮೆ ಯಾಚಿಸಿದ್ದಳು.