ಬಿ.ಸಿ.ರೋಡ್-ಜಕ್ರಿಬೆಟ್ಟು ಚತುಷ್ಪಥ ರಸ್ತೆ ನಿರ್ಮಾಣದ ಬಗ್ಗೆ ಸರಕಾರಕ್ಕೆ ಮನವಿ : ರಮಾನಥ ರೈ

ಬಂಟ್ವಾಳ, ಎ. 10: ತಾಲೂಕಿನ ಕೇಂದ್ರ ಸ್ಥಾನದಲ್ಲಿ ಮಿನಿ ವಿಧಾನಸೌಧ ಸಹಿತ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗುತ್ತಿದ್ದು ಬಿ.ಸಿ.ರೋಡಿನಿಂದ ಜಕ್ರಿಬೆಟ್ಟುವರೆಗೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು. ಜೊತೆಗೆ ಮಣಿಹಳ್ಳ ಸೇತುವೆ ಅಗಲೀಕರಣಗೊಳಿಸಲಾಗುವುದು ಎಂದು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದರು.
ನೂತನವಾಗಿ ಅಸ್ತಿತ್ವಗೊಂಡ ಬಂಟ್ವಾಳ ತಾಲೂಕಿನ ಅರಳ ಗ್ರಾಮ ಪಂಚಾಯತ್‌ನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ 2015-16ನೆ ಸಾಲಿನ ಯೋಜನೆಯಲ್ಲಿ 19 ಲಕ್ಷ ರೂ. ವೆಚ್ಚದಲ್ಲಿ ಎರ್ಮಾಳದಲ್ಲಿ ನಿರ್ಮಿಸಲಾ ಭಾರತ್ ನಿರ್ಮಾಣ್ ರಾಜೀವ ಗಾಂಧಿ ಸೇವಾ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ನೂತನ ಗ್ರಾಮ ಪಂಚಾಯತ್‌ಗಳ ರಚನೆಯಾಗಿದ್ದು ಹೆಚ್ಚಿನ ಗ್ರಾಮ ಪಂಚಾಯತ್‌ಗಳಿಗೆ ನೂತನ ಕಟ್ಟಡ ನಿರ್ಮಾಣವಾಗಿದೆ. ಉಳಿದ ಗ್ರಾಪಂಗಳಿಗೆ ನೂತನ ಕಟ್ಟಡ ನಿರ್ಮಾಣ ಹಂತದಲ್ಲಿದೆ ಎಂದರು.
ಸಂಗಬೆಟ್ಟುನಲ್ಲಿ ಒಟ್ಟು 16 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು 36 ಕೋಟಿ ರೂ. ವೆಚ್ಚದಲ್ಲಿ ಈಗಾಗಲೇ ಅನುಷ್ಠಾನಗೊಂಡಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಶೀಘ್ರ ಲೋಕಾರ್ಪಣೆಗೊಳ್ಳಲಿದೆ. ಕರೋಪಾಡಿಯಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿ ಪೂರ್ಣಗೊಳ್ಳುತ್ತಿದೆ. ಅಲ್ಲದೆ ನರಿಕೊಂಬು-ಶಂೂರುನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಇದೇ 15ರಂದು ಶಿಲಾನ್ಯಾಸ ನೆರವೇರಲಿದೆ. ಇದರಿಂದ ತಾಲೂಕಿನ ಹಲವು ಗ್ರಾಮಗಳಿಗೆ ಕುಡಿಯುವ ನೀರಿನ ಸೌಲ್ಯ ಸಿಗಲಿದೆ ಎಂದರು. ಮೂಲರಪಟ್ನದಲ್ಲಿ ಪಲ್ಗುಣಿ ಹೊಳೆಗೆ ಸುಮಾರು 5 ಕೋಟಿ ರೂ. ವೆಚ್ಚದ ಹೊಸ ಕಿಂಡಿ ಅಣೆಕಟ್ಟು ನಿರ್ಮಿಸಲಾಗುತ್ತಿದ್ದು ಈ ಪ್ರದೇಶದಲ್ಲಿ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಅನುಕೂಲವಾಗುವುದರ ಜೊತೆ ಅಂತರ್ಜಲ ವೃದ್ಧಿಯಾಗುವುದು. ಅಣ್ಣಳಿಕೆ-ಕರ್ಪೆ-ಸಿದ್ಧಕಟ್ಟೆ ಸಂಪರ್ಕ ರಸ್ತೆ ವಿಸ್ತರಣೆ ಮತ್ತು ಡಾಮರೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಅಣ್ಣಳಿಕೆ-ಕರಿಮಲೆ-ವಾಮದಪದವು ರಸ್ತೆ ವಿಸ್ತರಣೆ ಮತ್ತು ಡಾಮರೀಕರಣಗೊಳಿಸಲು ಅನುದಾನ ಮಂಜೂರಾಗಿದೆ ಎಂದರು.
ಅರಳ ಗ್ರಾಮದ ಕಲ್ಪನೆ, ಅರಳ ಶುಂಠಿಹಿತ್ಲು ರಸ್ತೆ ಅಭಿವೃದ್ಧಿಗೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ಸುಮಾರು 3 ಕೋಟಿ ರೂ. ಅನುದಾನ,ಮೂಲರಪಟ್ನ-ಬಡಗಬೆಳ್ಳೂರು ಸಂಪರ್ಕ ಸೇತುವೆಗೆ 1 ಕೋ.ರೂ. ಅನುದಾನ, ಅರಳಎಸ್ಸಿ,ಎಸ್ಟಿ ಕಾಲನಿ ರಸ್ತೆ ಅಭಿವೃದ್ಧಿಗೆ 1 ಕೋಟಿ ರೂ. ಅನುದಾನ ಮಂಜೂರುಗೊಳಿಸಲಾಗಿದೆ ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಪಂ ಸದಸ್ಯ ಎಂ.ತುಂಗಪ್ಪ ಬಂಗೇರ ಮಾತನಾಡಿದರು. ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ, ಸದಸ್ಯೆ ಮಂಜುಳಾ ಸದಾನಂದ, ತಾಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ, ಗ್ರಾಪಂ ಅಧ್ಯಕ್ಷೆ ತುಂಗಮ್ಮ, ಸದಸ್ಯರಾದ ಎಂ.ಬಿ. ಅಶ್ರಪ್, ರಂಜಿನಿ ನಾಯ್ಕ, ಜೈನಾಬ್, ಲಕ್ಷ್ಮೀಧರ ಪೂಜಾರಿ, ಕಲ್ಯಾಣಿ, ಅಭಿಯಂತರ ಜಗದೀಶ್ ನಿಂಬಾಳ್ಕರ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಪಿಡಿಒ ವೈಲೆಟ್ ಮಿನೇಜಸ್ ಹಾಗೂ ಕಟ್ಟಡ ಕಾಮಗಾರಿಗೆ ಸಾಮಾಗ್ರಿ ಪೂರೈಸಿದ ರಂಜನ್ ಅರನ್ನು ಸಮ್ಮಾನಿಸಲಾಯಿತು. ಗ್ರಾಪಂ ಉಪಾಧ್ಯಕ್ಷ ಜಗದೀಶ್ ಆಳ್ವ ಸ್ವಾಗತಿಸಿದರು. ಪಂಚಾಯತ್ ಪ್ರಭಾರ ಅಭಿವೃದ್ಧಿ ಅಧಿಕಾರಿ ವೈಲೆಟ್ ಮಿನೇಜಸ್ ವರದಿ ವಾಚಿಸಿದರು. ಸದಸ್ಯರಾದ ಲಕ್ಷ್ಮೀಧರ ಶೆಟ್ಟಿ ಮಧ್ಯಾಳ ವಂದಿಸಿದರು. ಸದಸ್ಯ ಡೊಂಬಯ್ಯ ಅರಳ ಕಾರ್ಯಕ್ರಮ ನಿರೂಪಿಸಿದರು.







